ಟ್ರಂಪ್ ಜತೆ ಮಾತುಕತೆ ಅರ್ಥಹೀನ: ಇರಾನ್ ಪರಮೋಚ್ಛ ನಾಯಕ ಖಾಮಿನೈ

ಅಯತುಲ್ಲಾ ಆಲಿ ಖಾಮಿನೈ | PC : AP
ಟೆಹ್ರಾನ್: ಅಮೆರಿಕದೊಂದಿಗಿನ ಮಾತುಕತೆಗಳು ಬುದ್ಧಿವಂತಿಕೆ ಅಥವಾ ಗೌರವಾನ್ವಿತವಲ್ಲ ಎಂದು ಇರಾನ್ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಶುಕ್ರವಾರ ಹೇಳಿದ್ದಾರೆ.
ಇರಾನ್ ಜತೆಗೆ ಪರಮಾಣು ಮಾತುಕತೆ ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದ ಖಾಮಿನೈ ` ಅಂತಹ ಸರಕಾರದ ಜತೆ ಯಾವುದೇ ಮಾತುಕತೆ ನಡೆಸಬಾರದು' ಎಂದು ಹೇಳಿದರು. ಹಿಂದಿನ ಪರಮಾಣು ಒಪ್ಪಂದದಿಂದ ಟ್ರಂಪ್ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರು. ಈ ಒಪ್ಪಂದದ ಪ್ರಕಾರ ಅಮೆರಿಕ ಕಠಿಣ ನಿರ್ಬಂಧವನ್ನು ತೆಗೆದುಹಾಕುವುದಕ್ಕೆ ಪ್ರತಿಯಾಗಿ ಇರಾನ್ ಯುರೇನಿಯಂ ಸಂಸ್ಕರಣೆ ಹಾಗೂ ಇತರ ಕಚ್ಛಾವಸ್ತುಗಳ ಒಟ್ಟು ಸಂಗ್ರಹಣೆಯನ್ನು ತೀವ್ರವಾಗಿ ಕಡಿಮೆ ಮಾಡಿತ್ತು.
ಆದರೆ ಅಮೆರಿಕನ್ನರು ಅಂತಿಮವಾಗಿ ತಮ್ಮ ಮಾತಿಗೆ ತಪ್ಪಿದರು. ಈಗ ಅಧಿಕಾರದಲ್ಲಿರುವ ಇದೇ ವ್ಯಕ್ತಿ ಒಪ್ಪಂದವನ್ನು ಹರಿದೆಸೆದರು. ಅವರು ಹೇಳಿದಂತೆಯೇ ಮಾಡಿದರು. ಈ ಪ್ರಕರಣದಲ್ಲಿ ನಾವು ಅವರಿಂದ ಪಾಠ ಕಲಿಯಬೇಕಾಗಿದೆ. ನಾವು ಮಾತುಕತೆ ನಡೆಸಿದೆವು, ವಿನಾಯಿತಿ ನೀಡಿದೆವು, ಹೊಂದಾಣಿಕೆ ಮಾಡಿಕೊಂಡೆವು. ಆದರೆ ನಾವು ಹಾಕಿಕೊಂಡ ಗುರಿ ಸಾಧಿಸಲು ವಿಫಲವಾದೆವು. ಆದರೆ ಅಂತಿಮವಾಗಿ ಅವರು(ಅಮೆರಿಕ) ಒಪ್ಪಂದವನ್ನು ಉಲ್ಲಂಘಿಸಿದರು ಮತ್ತು ನಾಶಗೊಳಿಸಿದರು' ಎಂದು ಖಾಮಿನೈ ಹೇಳಿದ್ದಾರೆ.