ತನ್ನ ದೇಶವನ್ನು ಉಳಿಸುವವನು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ: ನೆಪೋಲಿಯನ್ ಹೇಳಿಕೆ ಉಲ್ಲೇಖಿಸಿದ ಟ್ರಂಪ್

ಡೊನಾಲ್ಡ್ ಟ್ರಂಪ್ | PC : NDTV
ವಾಷಿಂಗ್ಟನ್: ತನ್ನ ದೇಶವನ್ನು ಉಳಿಸುವವನು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಮ್ಮ ಕಾರ್ಯನಿರ್ವಾಹಕ ಅಧಿಕಾರವನ್ನು ಸೀಮಿತಗೊಳಿಸುವ ಉದ್ದೇಶದ ಹಲವಾರು ಕಾನೂನು ಸವಾಲುಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, ಫ್ರಾನ್ಸ್ನ ಮಾಜಿ ಚಕ್ರವರ್ತಿ ನೆಪೋಲಿಯನ್ ಬೊನಾಪಾರ್ಟೆಯ ಹೇಳಿಕೆಯನ್ನು ಉಲ್ಲೇಖಿಸಿ `ಇದು ದೇಶವನ್ನು ಉಳಿಸಿದರೆ ಅದು ಕಾನೂನುಬಾಹಿರವಲ್ಲ' ಎಂದು ಹೇಳಿದ್ದಾರೆ.
ಫ್ರಾನ್ಸ್ ನ ಮಿಲಿಟರಿ ಮುಖಂಡನಾಗಿದ್ದ ನೆಪೋಲಿಯನ್ ತನ್ನನ್ನು ಚಕ್ರವರ್ತಿ ಎಂದು ಘೋಷಿಸಿಕೊಳ್ಳುವ ಮುನ್ನ `ನೆಪೋಲಿಯನ್ ನಾಗರಿಕ ಸಂಹಿತೆ'ಯನ್ನು ರಚಿಸಿದ್ದರು. ಆಗಾಗ ಫ್ರಾನ್ಸ್ ನಲ್ಲಿನ ತನ್ನ ಸರ್ವಾಧಿಕಾರಿ ಆಡಳಿತವನ್ನು ಸಮರ್ಥಿಸುತ್ತಾ, ಇದು ಜನರ ಇಚ್ಛೆಯಾಗಿದೆ. ದೇಶವನ್ನು ಉಳಿಸುವ ಯಾವುದೇ ಕೆಲಸ ಖಂಡಿತಾ ಕಾನೂನು ಬಾಹಿರವಾಗುವುದಿಲ್ಲ' ಎಂದು ಪ್ರತಿಪಾದಿಸುತ್ತಿದ್ದರು.
ಟ್ರಂಪ್ ಆಡಳಿತ ಕೈಗೊಂಡಿರುವ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ, ಅಮೆರಿಕದ ಮಿಲಿಟರಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ನಿಷೇಧ, ಫೆಡರಲ್ ಸಿಬ್ಬಂದಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿರುವುದು, ಉದ್ಯೋಗಿಗಳು ಆಡಳಿತದ ನೀತಿಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸಲು ವಿಫಲವಾದರೆ ಅವರನ್ನು ವಜಾಗೊಳಿಸುವ ಏಕಪಕ್ಷೀಯ ಅಧಿಕಾರವನ್ನು ಶ್ವೇತಭವನಕ್ಕೆ ನೀಡಿರುವುದು ಸೇರಿದಂತೆ ಅಧ್ಯಕ್ಷರ ಕಾರ್ಯನಿರ್ವಾಹಕ ಆದೇಶಗಳನ್ನು ಪ್ರಶ್ನಿಸಿ ಹಲವಾರು ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆಯನ್ನು ಪ್ರಶ್ನಿಸಿ ಕನಿಷ್ಟ 10 ಮೊಕದ್ದಮೆ, ಜನ್ಮಸಿದ್ದ ಪೌರತ್ವ ಹಕ್ಕನ್ನು ಅಂತ್ಯಗೊಳಿಸುವ ಆದೇಶವನ್ನು ಪ್ರಶ್ನಿಸಿ 7 ಮೊಕದ್ದಮೆ ದಾಖಲಿಸಲಾಗಿದೆ. 2021ರ ಕ್ಯಾಪಿಟಲ್ ದಂಗೆ ಪ್ರಕರಣದ ತನಿಖೆ ನಡೆಸುವ ಎಫ್ಬಿಐ ಏಜೆಂಟರ ಹಾಗೂ ಎಫ್ಬಿಐ ಸಿಬ್ಬಂದಿಗಳ ಹೆಸರುಗಳನ್ನು ಬಿಡುಗಡೆಗೊಳಿಸಿರುವುದನ್ನು ಪ್ರಶ್ನಿಸಿಯೂ ಮೊಕದ್ದಮೆ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶಗಳಿಗೆ ತಾನು ಬದ್ಧ ಎಂದು ಟ್ರಂಪ್ ಹೇಳಿದ್ದರೂ, ಅವರ ಸಲಹೆಗಾರರು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಧೀಶರ ಮೇಲೆ ದಾಳಿ ನಡೆಸುತ್ತಿದ್ದು ನ್ಯಾಯಾಧೀಶರನ್ನು ವಾಗ್ದಂಡನೆಗೆ ಗುರಿಪಡಿಸುವಂತೆ ಆಗ್ರಹಿಸುತ್ತಿದ್ದಾರೆ. `ಕಾರ್ಯಾಂಗದ ಕಾನೂನುಬದ್ಧ ಅಧಿಕಾರಗಳನ್ನು ನ್ಯಾಯಾಧೀಶರು ನಿಯಂತ್ರಿಸಲು ಬಿಡಬಾರದು ಎಂದು ಉಪಾಧ್ಯಕ್ಷ ಜೆಡಿ ವಾನ್ಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸಿ' ಎಂಬ ಘೋಷವಾಕ್ಯವನ್ನು ಉಚ್ಛರಿಸುತ್ತಿರುವ ಟ್ರಂಪ್ ` ಕಳೆದ ಜುಲೈಯಲ್ಲಿ ಹತ್ಯೆ ಯತ್ನದಿಂದ ತಾನು ಪಾರಾಗಿರುವುದು ದೇವರ ಇಚ್ಛೆಯಾಗಿತ್ತು. ಒಂದು ಸಕಾರಣಕ್ಕಾಗಿ ದೇವರು ನನ್ನ ಪ್ರಾಣವನ್ನು ಉಳಿಸಿದ್ದಾನೆ. ಅದು ಅಮೆರಿಕವನ್ನು ಉಳಿಸುವುದು ಮತ್ತು ಅಮೆರಿಕದ ಶ್ರೇಷ್ಠತೆಯನ್ನು ಮರುಸ್ಥಾಪಿಸುವ ಕಾರ್ಯ' ಎಂದು ಘೋಷಿಸಿದ್ದರು.
*ನೈಜ ಸರ್ವಾಧಿಕಾರಿಯಂತೆ ಹೇಳಿಕೆ
ಟ್ರಂಪ್ ಅವರ ಹೇಳಿಕೆಗೆ ವಿರೋಧ ಪಕ್ಷ ಡೆಮಾಕ್ರಟಿಕ್ ಸದಸ್ಯರಿಂದ ತೀವ್ರ ಖಂಡನೆ ಮತ್ತು ಟೀಕೆ ವ್ಯಕ್ತವಾಗಿದೆ. `ಟ್ರಂಪ್ ಓರ್ವ ನಿಜವಾದ ಸರ್ವಾಧಿಕಾರಿಯಂತೆ ಹೇಳಿಕೆ ನೀಡಿದ್ದಾರೆ ಎಂದು ಡೆಮಾಕ್ರಟಿಕ್ ಸೆನೆಟರ್ ಆಡಮ್ ಸ್ಕಿಫ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಟ್ರಂಪ್ ಅವರ ವಾಗ್ದಂಡನೆ ವಿಚಾರಣೆಯಲ್ಲಿ ಟ್ರಂಪ್ ವಿರುದ್ಧ ವಾದ ಮಂಡಿಸಿದ್ದ ನ್ಯಾಯವಾದಿ ನಾರ್ಮ್ ಎಯಿಸನ್ `ಅಧ್ಯಕ್ಷರು ಮಾಡಿದ್ದಾರೆ ಎಂದಾದ ಮೇಲೆ ಅದು ಅಕ್ರಮವಾಗುವುದಿಲ್ಲ' ಎಂದು ಟ್ರಂಪ್ ಅವರ ವಕೀಲರು ನಿರಂತರ ಪ್ರತಿಪಾದಿಸಿದ್ದರು. ಅಧ್ಯಕ್ಷರ ಅಕ್ರಮ ಕೃತ್ಯಗಳನ್ನು ಕ್ಷಮಿಸಬೇಕು ಎಂಬ ನೆಪೋಲಿಯನ್ ಹೇಳಿಕೆಯನ್ನು ಟ್ರಂಪ್ ಹೇಳಿಕೆ ಪ್ರತಿಬಿಂಬಿಸಿದೆ' ಎಂದಿದ್ದಾರೆ.