ಉಕ್ರೇನ್ಗೆ ಮಿಲಿಟರಿ ನೆರವು ಸ್ಥಗಿತಗೊಳಿಸಿದ ಅಮೆರಿಕ : ರಷ್ಯಾ ಜೊತೆ ಶಾಂತಿ ಮಾತುಕತೆಗೆ ಒತ್ತಡ

Photo | AFP
ವಾಶಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ಗೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದು, ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳುವಂತೆ ಉಕ್ರೇನ್ಗೆ ಅಮೆರಿಕ ಮತ್ತಷ್ಟು ಒತ್ತಡ ಹಾಕಿದೆ.
ಅಮೆರಿಕದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮತ್ತು ಟ್ರಂಪ್ ನಡುವಿನ ಮಾತುಕತೆ, ಜಟಾಪಟಿ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಉಕ್ರೇನ್ಗೆ ಶಸ್ತ್ರಾಸ್ತ್ರಗಳ ನೆರವು ಸ್ಥಗಿತಗೊಳಿಸಿದರೆ ರಷ್ಯಾದ ಮೇಲಿನ ಆಕ್ರಮಣವನ್ನು ಹಿಮ್ಮೆಟ್ಟಿಸಲು ಸಾಧ್ಯ ಎನ್ನುವುದು ಅಮೆರಿಕದ ಲೆಕ್ಕಾಚಾರವಾಗಿದೆ.
ʼಅಮೆರಿಕದ ಅಧ್ಯಕ್ಷರು ಶಾಂತಿಯತ್ತ ಗಮನಹರಿಸಿದ್ದಾರೆ. ನಮ್ಮ ಪಾಲುದಾರರು ಆ ಗುರಿಗೆ ಬದ್ಧರಾಗಿರುವ ಅಗತ್ಯವಿದೆ. ನಾವು ನಮ್ಮ ಸಹಾಯವನ್ನು ಸ್ಥಗಿತಗೊಳಿಸಿ ಇದು ಯುದ್ಧ ವಿರಾಮಕ್ಕೆ ನೆರವು ನೀಡುತ್ತಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆʼ ಎಂದು ಶ್ವೇತಭವನದ ಅಧಿಕಾರಿಯೋರ್ವರು ತಿಳಿಸಿರುವ ಬಗ್ಗೆ ಮಧ್ಯಮಗಳು ವರದಿ ಮಾಡಿದೆ.
ಸೋಮವಾರ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಝೆಲೆನ್ಸ್ಕಿಯ ಧಿಕ್ಕಾರದ ನಿಲುವುಗಳನ್ನು ಹೆಚ್ಚು ಕಾಲ ಸಹಿಸಿಕೊಳ್ಳುವುದಿಲ್ಲ. ರಷ್ಯಾದೊಂದಿಗೆ ಕದನ ವಿರಾಮ ಒಪ್ಪಂದವಿಲ್ಲದೆ ಝೆಲೆನ್ಸ್ಕಿ ಬಹಳ ಸಮಯ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಮಿಲಿಟರಿ ನೆರವು ಪೂರೈಕೆ ಸ್ಥಗಿತವು ತಕ್ಷಣವೇ ಜಾರಿಗೆ ಬಂದಿದೆ. ಉಕ್ರೇನ್ಗೆ ನೂರಾರು ಮಿಲಿಯನ್ ಡಾಲರ್ಗಳ ಶಸ್ತ್ರಾಸ್ತ್ರಗಳ ಪೂರೈಕೆ ಮೇಲೆ ಇದು ಪರಿಣಾಮ ಬೀರಲಿದೆ ಎಂದು ನ್ಯೂಯಾರ್ಕ್ ಟೈಮ್ಸ್(New York Times) ವರದಿ ಮಾಡಿದೆ.