ವ್ಯಾಪಾರ ಸಂಘರ್ಷದ ನಡುವೆಯೇ ಮೋದಿ ಬಗ್ಗೆ ಟ್ರಂಪ್ ಗುಣಗಾನ!

PC: x.com/TimesAlgebraIND
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು "ಶ್ರೇಷ್ಠ ಸ್ನೇಹಿತ' ಹಾಗೂ 'ವೆರಿ ಸ್ಮಾರ್ಟ್ ಮ್ಯಾನ್' ಎಂದು ಗುಣಗಾನ ಮಾಡಿದ್ದಾರೆ. ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಅಧಿಕ ಸುಂಕ ಬಗೆಗಿನ ತಮ್ಮ ನಿಲುವನ್ನು ಪುನರುಚ್ಚರಿಸಿದ ನಡುವೆಯೇ ಈ ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದರು.
"ಪ್ರಧಾನಿ ಮೋದಿಯವರು ಇತ್ತೀಚೆಗೆ ಇಲ್ಲಿಗೆ ಆಗಮಿಸಿದ್ದರು. ನಾವು ಸದಾ ಒಳ್ಳೆಯ ಸ್ನೇಹಿತರು. ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು. ಅವರು ಅತ್ಯಂತ ಜಾಣರು" ಎಂದು ಟ್ರಂಪ್ ಬಣ್ಣಿಸಿದರು. "ಅವರು ಅತ್ಯಂತ ಚತುರ ಹಾಗೂ ನನ್ನ ಒಳ್ಳೆಯ ಸ್ನೇಹಿತ. ನಮ್ಮ ಮಧ್ಯೆ ಉತ್ತಮ ಮಾತುಕತೆ ನಡೆದಿದೆ. ಇದು ಭಾರತ ಹಾಗೂ ನಮ್ಮ ದೇಶದ ನಡುವೆ ಒಳ್ಳೆಯ ಬಾಂಧವ್ಯಕ್ಕೆ ಕಾರಣವಾಗಲಿದೆ ಎಂದು ನಾನು ಭಾವಿಸುತ್ತೇನೆ. ನೀವು ಅತ್ಯುತ್ತಮ ಪ್ರಧಾನಿ ಎಂದು ಹೇಳಲು ನಾನು ಬಯಸುತ್ತೇನೆ" ಎಂದು ವಿವರಿಸಿದರು.
ಏಪ್ರಿಲ್ 2ರಿಂದ ಭಾರತ ಸೇರಿದಂತೆ ವಿವಿಧ ದೇಶಗಳ ವಿರುದ್ಧ ಪ್ರತೀಕಾರಾತ್ಮಕ ಸುಂಕವನ್ನು ಹೇರಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಭಾರತದ ವ್ಯಾಪಾರ ನೀತಿಗಳನ್ನು ನಿರಂತರವಾಗಿ ಟ್ರಂಪ್ ಟೀಕಿಸುತ್ತಾ ಬಂದಿದ್ದು, ಭಾರತದ ಆಮದು ಸುಂಕಗಳು ಅತ್ಯಂತ ನ್ಯಾಯಸಮ್ಮತವಲ್ಲದ್ದು ಹಾಗೂ ಪ್ರಬಲ ಎಂದಿದ್ದಾರೆ. ಜೊತೆಗೆ ಭಾರತವನ್ನು 'ಸುಂಕದ ರಾಜ' ಎಂದು ಕರೆದಿದ್ದರು.
"ಭಾರತದ ಜೊತೆ ನನಗೆ ಒಳ್ಳೆಯ ಸಂಬಂಧ ಇದೆ. ಆದರೆ ಏಕೈಕ ಸಮಸ್ಯೆಯೆಂದರೆ, ಅದು ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶ. ಸುಸ್ಥಿರತೆಯನ್ನು ಕಾಪಾಡುವ ಸಲುವಾಗಿ ಸುಂಕವನ್ನು ಭಾರತ ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ನನ್ನದು. ಆದರೆ ಏಪ್ರಿಲ್ 2ರಂದು ನಮ್ಮ ಮೇಲೆ ಅವರು ವಿಧಿಸುವಷ್ಟೇ ಸುಂಕವನ್ನು ನಾವೂ ಹೇರಲಿದ್ದೇವೆ" ಎಂದು ಈ ಮೊದಲು ಹೇಳಿಕೆ ನೀಡಿದ್ದರು.