ಕಮಲಾ ಹ್ಯಾರಿಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್ ಪ್ರಕಟಿಸಿದ ಟ್ರಂಪ್ : ವ್ಯಾಪಕ ಆಕ್ರೋಶ
ಡೊನಾಲ್ಡ್ ಟ್ರಂಪ್ , ಕಮಲಾ ಹ್ಯಾರಿಸ್ | PC : PTI
ವಾಶಿಂಗ್ಟನ್ : ಅಮೆರಿಕದ ಉಪಾಧ್ಯಕ್ಷೆ ಹಾಗೂ ಅಧ್ಯಕ್ಷೀ ಚುನಾವಣೆಗೆ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಕುರಿತಾದ ಅಸಭ್ಯ ಹೇಳಿಕೆಯುಳ್ಳ ಪೋಸ್ಟ್ ಒಂದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಮರುಪ್ರಕಟಿಸುವ ಮೂಲಕ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದದ ಕಿಚ್ಚು ಹಚ್ಚಿದ್ದಾರೆ. ಟ್ರಂಪ್ರ ಈ ನಡವಳಿಕೆಗೆ ಅಮೆರಿಕದಲ್ಲಿ ರಾಜಕಾರಣಿಗಳು, ಚಿಂತಕರು ಸೇರಿದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಲೈಂಗಿಕ ಸಂಬಂಧಗಳ ಮೂಲಕ ಕಮಲಾ ಹ್ಯಾರಿಸ್ ತನ್ನ ರಾಜಕೀಯ ಜೀವನದಲ್ಲಿ ಉನ್ನತಿಯನ್ನು ಸಾಧಿಸಿದ್ದಾರೆಂದು ಟ್ರಂಪ್ ಅವರ ಬೆಂಬಲಿಗರೊಬ್ಬರು ಪೋಸ್ಟ್ ಮಾಡಿದ್ದರು. ಅದನ್ನು ಟ್ರಂಪ್ ಅವರು ತನ್ನ ಸಾಮಾಜಿಕ ಜಾಲತಾಣ ಟ್ರೂಥ್ ಸೋಶಿಯಲ್ನಲ್ಲಿ ಮರುಪ್ರಕಟಿಸಿದ್ದರು. ಸ್ಯಾನ್ ಫ್ರಾನ್ಸಿಸ್ಕೊದ ಮಾಜಿ ಮೇಯರ್ ವಿಲ್ಲಿ ಬ್ರೌನ್ ಅವರೊಂದಿಗೆ ಕಮಲಾ ಹ್ಯಾರಿಸ್ಗೆ ಇದ್ದ ಸಂಬಂಧವನ್ನು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿತ್ತು. ಕಮಲಾ ಹ್ಯಾರಿಸ್ ಜೊತೆ ಪ್ರೇಮಸಂಬಂಧವಿದ್ದ ಸಮಯದಲ್ಲಿ ಬ್ರೌನ್ ಅವರು ಕ್ಯಾಲಿಫೋರ್ನಿಯಾ ರಾಜ್ಯ ಅಸೆಂಬ್ಲಿಯ ಸ್ಪೀಕರ್ ಆಗಿದ್ದರು.
ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿಕ್ಲಿಂಟ್ ಅವರನ್ನು ಕೂಡಾ ಪೋಸ್ಟ್ನಲ್ಲಿ ನಿಂದಿಸಲಾಗಿದ್ದು, ಅವರ ಪತಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಶ್ವೇತಭವನದ ಉದ್ಯೋಗಿ ಮೋನಿಕಾ ಲೆವಿನ್ಸ್ಕಿ ಜೊತೆಗಿದ್ದ ಸಂಬಂಧದ ಬಗ್ಗೆ ಅಶ್ಲೀಲ ಅನಿಸಿಕೆಗಳನ್ನು ವ್ಯಕ್ತಪಡಿಸಲಾಗಿದೆ.