ಅಮೆರಿಕ ಮಾರುಕಟ್ಟೆಯಲ್ಲಿ ತಲ್ಲಣ: ಏಪ್ರಿಲ್ 2ರವರೆಗೆ ಸುಂಕ ತಡೆಹಿಡಿದ ಟ್ರಂಪ್

PC: x.com/the_hindu
ವಾಷಿಂಗ್ಟನ್: ಅಮೆರಿಕದ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಕೆನಡಾ ಮತ್ತು ಮೆಕ್ಸಿಕೋದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ವಿಧಿಸಿದ್ದ ಸುಂಕವನ್ನು ಏಪ್ರಿಲ್ 2ರವರೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆಹಿಡಿದಿದ್ದಾರೆ. ಇದರಿಂದಾಗಿ ಅಮೆರಿಕದ ವ್ಯಾಪಾರಿಗಳು ಮತ್ತು ಗ್ರಾಹಕರು ಸದ್ಯಕ್ಕೆ ನಿರಾಳವಾಗಿದ್ದಾರೆ.
ಉತ್ತರ ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ನೆರೆಯ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡ 25ರಷ್ಟು ಸುಂಕವನ್ನು ಹೇರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಾರದ ಆರಂಭದಲ್ಲಿ ಆದೇಶ ಹೊರಡಿಸಿದ್ದರು. ಈ ನಡೆಯನ್ನು ಏಪ್ರಿಲ್ 2ರವರೆಗೆ ತಡೆ ಹಿಡಿಯುವುದಾಗಿ ಅವರು ಘೋಷಿಸಿದ್ದಾರೆ.
ಈ ನಿರ್ಧಾರಕ್ಕೆ ಮುನ್ನ ಆಟೊಮೋಟಿವ್ ವಲಯಕ್ಕೆ ಏಪ್ರಿಲ್ 2ರವರೆಗೆ ಸುಂಕ ವಿನಾಯಿತಿ ನೀಡಲಾಗಿತ್ತು. ಅಮೆರಿಕದ ವಾಹನ ತಯಾರಿಕಾ ದಿಗ್ಗಜರಾದ ಸ್ಟೆಲೆಂಟೀಸ್, ಫೋರ್ಡ್ ಮತ್ತು ಜನರಲ್ ಮೋಟರ್ಸ್ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಅಮೆರಿಕ-ಮೆಕ್ಸಿಕೊ-ಕೆನಡಾ ಒಪ್ಪಂದದ ಅಡಿಯಲ್ಲಿ ವಾಹನಗಳ ಸಾಗಾಣಿಕೆಗೆ ಒಂದು ತಿಂಗಳ ವಿನಾಯಿತಿಯನ್ನು ಟ್ರಂಪ್ ಘೋಷಿಸಿದ್ದರು. ಆದರೂ ಕೆನಡಾ ಮತ್ತು ಮೆಕ್ಸಿಕೋದ ಬಹುತೇಕ ರಫ್ತು ಭಾಗದ ಮೇಲೆ ಪರಿಣಾಮ ಬೀರಲಿದೆ ಎಂಬ ಸುಳಿವನ್ನು ಶ್ವೇತಭವನ ನೀಡಿದೆ.
ಕೆನಡಾದಿಂದ ಆಮದಾಗುವ ಶೇಕಡ 62ರಷ್ಟು ಉತ್ಪನ್ನಗಳಿಗೆ ಹೊಸ ಸುಂಕ ನೀತಿಯ ಅನ್ವಯ ಸುಂಕ ಮುಂದುವರಿಯಲಿದೆ. ಪ್ರಾಥಮಿಕ ಇಂಧನ ಆಮದನ್ನು ಶೇಕಡ 10ರಷ್ಟು ಕಡಿತ ದರದಲ್ಲಿ ಮಾಡಿಕೊಳ್ಳಲಾಗುತ್ತದೆ. ಏತನ್ಮಧ್ಯೆ ಮೆಕ್ಸಿಕೋದಿಂದ ಯುಎಸ್ಎಂಸಿಎ ಒಪ್ಪಂದದ ಅಡಿಯಲ್ಲಿ ಆಮದಾಗುವ ಸರಕುಗಳಿಗೆ ಹೆಚ್ಚುವರಿ ಸುಂಕದಿಂದ ವಿನಾಯ್ತಿ ಇದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.