ಸನಿಹದಲ್ಲೇ ಗುಂಡಿನ ದಾಳಿ: ಅಪಾಯದಿಂದ ಪಾರಾದ ಟ್ರಂಪ್
ಡೊನಾಲ್ಡ್ ಟ್ರಂಪ್ (PTI)
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸನಿಹದಲ್ಲೇ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಸುರಕ್ಷಿತವಾಗಿ ಪಾರಾಗಿದ್ದರೆ ಎಂದು ವರದಿಯಾಗಿದೆ. ರವಿವಾರ ಸಂಜೆ ಫ್ಲೋರಿಡಾದ ಪಶ್ಚಿಮ ಪಾಮ್ಬೀಚ್ನಲ್ಲಿರುವ ತಮ್ಮ ಗಾಲ್ಫ್ ಕ್ಲಬ್ನಿಂದ ಹೊರಡುತ್ತಿದ್ದಂತೆ ದಾಳಿ ನಡೆದಿದೆ ಎಂದು ʼದಿ ಸೀಕ್ರೆಟ್ ಸರ್ವೀಸ್ʼ ಹೇಳಿದೆ. ಟ್ರಂಪ್ ಆಟವಾಡುತ್ತಿದ್ದ ಕ್ಲಬ್ನ ಹೊರಗೆ ಗಸ್ತು ಕಾಯುತ್ತಿದ್ದ ಸೀಕ್ರೆಟ್ ಸರ್ವೀಸ್ ಏಜೆಂಟ್, ಬೇಲಿಯ ಹೊರಗಿನಿಂದ ಗುಂಡು ಹಾರಿಸುತ್ತಿರುವುದನ್ನು ಗಮನಿಸಿದ್ದಾರೆ ಎಂದು ಶೆರಿಫ್ ಬ್ರಾಡ್ಶೋ ಹೇಳಿದ್ದಾರೆ.
ಶಂಕಿತ ದಾಳಿಕೋರ ತಪ್ಪಿಸಿಕೊಳ್ಳುವ ಮುನ್ನ ಏಜೆಂಟ್ ನಾಲ್ಕರಿಂದ ಆರು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಒಬ್ಬರು ಶಂಕಿತನ ವಾಹನ ಮತ್ತು ಲೈಸನ್ಸ್ ಪ್ಲೇಟ್ನ ಫೋಟೊ ಸೆರೆ ಹಿಡಿದಿದ್ದು, ಕಾನೂನು ಜಾರಿ ಅಧಿಕಾರಿಗಳಿಗೆ ನೀಡಲಾಗಿದೆ. ಟ್ರಂಪ್ ಹತ್ಯೆಯ ಪ್ರಯತ್ನ ಇದಾಗಿದೆ ಎಂದು ಎಫ್ಬಿಐ ದೃಢಪಡಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30ಕ್ಕೆ ನಡೆದ ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
"ಎಫ್ಬಿಐ ತಮಡ ಪಶ್ಚಿಮ ಪಾಮ್ ಬೀಚ್ ಫ್ಲೋರಿಡಾಗೆ ಧಾವಿಸಿದ್ದು, ಮಾಜಿ ಅಧ್ಯಕ್ಷ ಟ್ರಂಪ್ ಅವರ ಹತ್ಯೆ ಯತ್ನದ ಬಗ್ಗೆ ತನಿಖೆ ಆರಂಭಿಸಿದೆ" ಎಂದು ಎಫ್ಬಿಐ ಸ್ಪಷ್ಟಪಡಿಸಿದೆ. ಎಕೆ-47 ಹಾಗೂ ಒಂದು ಗೊಪ್ರೊ ಹೊಂದಿದ್ದ ದಾಳಿಕೋರ ಟ್ರಂಪ್ಗಿಂತ ಸುಮಾರು 400-500 ಮೀಟರ್ ದೂರದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಟ್ರಂಪ್ ತಮ್ಮ ಬೆಂಬಲಿಗರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸುವ ಹೇಳಿಕೆ ಬಿಡುಗಡೆ ಮಾಡಿದ್ದಾರೆ. "ನನ್ನ ಸಮೀಪದಲ್ಲಿ ಗುಂಡಿನದಾಳಿ ನಡೆದಿದೆ. ಆದರೆ ವದಂತಿಗಳು ನಮ್ಮ ನಿಯಂತ್ರಣ ಮೀರುವ ಮುನ್ನ ನಾನು ಇದನ್ನು ಹೇಳಬಯಸುತ್ತೇನೆ: "ನಾನು ಸುರಕ್ಷಿತವಾಗಿದ್ದೇನೆ ಮತ್ತು ಇರುತ್ತೇನೆ!. ನಾನು ಎಂದಿಗೂ ಶರಣಾಗುವುದಿಲ್ಲ!" ಎಂದು ಸ್ಪಷ್ಟಪಡಿಸಿದ್ದಾರೆ.