ಭಾರತ ನಮಗೆ 100% ಸುಂಕ ವಿಧಿಸುತ್ತಿದೆ : ಡೊನಾಲ್ಡ್ ಟ್ರಂಪ್ ಅಸಮಾಧಾನ
ಪ್ರತಿ ಸುಂಕ ವಿಧಿಸುವುದಾಗಿ ಘೋಷಿಸಿದ ಅಮೆರಿಕದ ಅಧ್ಯಕ್ಷ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (PTI)
ಹೊಸದಿಲ್ಲಿ: ಆಮೆರಿಕದ ಉತ್ಪನ್ನಗಳಿಗೆ ಅಧಿಕ ಸುಂಕಗಳನ್ನು ವಿಧಿಸುತ್ತಿರುವುದಕ್ಕಾಗಿ ಭಾರತದ ಮೇಲೂ ಪ್ರತಿ ಸುಂಕಗಳನ್ನು ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರೊಂದಿಗೆ ಭಾರತದೊಂದಿಗೆ ನಡೆಸಲುದ್ದೇಶಿಸಲಾದ ವ್ಯಾಪಾರ ಮಾತುಕತೆಗಳು, ಅಧಿಕ ಸುಂಕ ಹೇರಿಕೆಯಿಂದ ಯಾವುದೇ ರಿಯಾಯಿತಿಗಳನ್ನು ನೀಡುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ ಎಪ್ರಿಲ್ 2ರಿಂದ ಅಮೆರಿಕ ಜಾರಿಗೊಳಿಸಲಿರುವ ಪ್ರತಿ ಸುಂಕ (ರೆಸಿಪ್ರೊಕಲ್ ಟ್ಯಾಕ್ಸ್) ಭಾರತ, ಚೀನಾ ಮತ್ತಿತರ ದೇಶಗಳಿಗೂ ಅನ್ವಯವಾಗಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವಾಶಿಂಗ್ಟನ್ನಲ್ಲಿ ಅಮೆರಿಕ ಕಾಂಗ್ರೆಸ್ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಘೋಷಣೆ ಮಾಡಿದ್ದಾರೆ. ವಿಶೇಷವಾಗಿ ಅಟೋಮೊಬೈಲ್ ಕ್ಷೇತ್ರದಲ್ಲಿ ಭಾರತವು ಅಮೆರಿಕದ ಉತ್ಪನ್ನಗಳಿಗೆ 100 ಶೇಕಡಕ್ಕೂ ಅಧಿಕ ಸುಂಕವನ್ನು ಭಾರತ ವಿಧಿಸುತ್ತಿರುವುದಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಭಾರತವು ನಮಗೆ 100 ಶೇಕಡ ಸುಂಕಗಳನ್ನು ವಿಧಿಸುತ್ತಿದೆ. ಈ ವ್ಯವಸ್ಥೆಯು ಅಮೆರಿಕಕ್ಕೆ ನ್ಯಾಯ ಸಮ್ಮತವಲ್ಲ. ಎಪ್ರಿಲ್ 2ರಂದು ಪ್ರತಿಸುಂಕಗಳನ್ನು ಜಾರಿಗೊಳ್ಳಲಿವೆ. ಅವರು ಯಾವುಕ್ಕೆಲ್ಲಾ ತೆರಿಗೆ ಹಾಕುತ್ತಾರೋ ನಾವು ಕೂಡಾ ಅವರ ಉತ್ಪನ್ನಗಳಿಗೆ ಅಷ್ಟೇ ಸುಂಕವನ್ನು ವಿಧಿಸುತ್ತೇವೆ. ಅವರ ಮಾರುಕಟ್ಟೆಯಿಂದ ನಮ್ಮನ್ನು ಹೊರಗಿಡಲು ಒಂದು ವೇಳೆ ಅವರು ಹಣಕಾಸೇತರ ವಿಧಾನಗಳನ್ನು ಬಳಸಿಕೊಂಡಲ್ಲಿ, ನಾವು ಕೂಡಾ ನಮ್ಮ ಮಾರುಕಟ್ಟೆಯಿಂದ ಅವರನ್ನು ದೂರವಿಡಲು ನಾವು ಹಣಕಾಸೇತರ ತಡೆಬೇಲಿಗಳನ್ನು ಬಳಸಲಿದ್ದೇವೆ’’ ಎಂದು ಟ್ರಂಪ್ ಹೇಳಿದರು.
ಹಲವಾರು ವರ್ಷಗಳಿಂದ ಇತರ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ಅಧಿಕ ಸುಂಕಗಳನ್ನು ವಿಧಿಸುತ್ತಿದ್ದು, ಇದೀಗ ಇತರ ದೇಶಗಳ ವಿರುದ್ಧವೂ ಅಮೆರಿಕ ಕೂಡಾ ಅಷ್ಟೇ ಪ್ರಮಾಣದಲ್ಲಿ ಅಧಿಕ ಸುಂಕಗಳನ್ನು ವಿಧಿಸುವ ಸಮಯ ಬಂದಿದೆಯೆಂದು ಟ್ರಂಪ್ ಇಂದು ಅಮೆರಿಕ ಕಾಂಗ್ರೆಸ್ನ ಜಂಟಿ ಅಧಿವೇಶನದಲ್ಲಿ ಮಾತನಾಡುತ್ತಾ ಹೇಳಿದರು.
ಯುರೋಪ್ ಒಕ್ಕೂಟ, ಚೀನಾ, ಬ್ರೆಝಿಲ್ ಹಾಗೂ ಭಾರತ ಮತ್ತಿತರ ದೇಶಗಳು ಅಮೆರಿಕದ ಮೇಲೆ ಅಧಿಕ ಸುಂಕಗಳನ್ನು ವಿಧಿಸುತ್ತಿರುವುದು ನ್ಯಾಯಯುತವಲ್ಲವೆಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಅಮೆರಿಕ ಭೇಟಿಯ ಬಳಿಕ ಭಾರತೀಯ ಉತ್ಪನ್ನಗಳಿಗೆ ಅಮೆರಿಕ ಮಾರುಕಟ್ಟೆಯಲ್ಲಿ ಅತ್ಯಧಿಕ ಸುಂಕ ಹೇರಿಕೆಯಿಂದ ರಿಯಾಯಿತಿ ದೊರೆಯಬಹುದೆಂಬ ಆಶಾವಾದವನ್ನು ಹೊಂದಿದ್ದ ಭಾರತೀಯ ಉದ್ಯಮವಲಯಕ್ಕೆ ಟ್ರಂಪ್ ಅವರ ಇಂದಿನ ಘೋಷಣೆ ನಿರಾಶೆಯನ್ನುಂಟು ಮಾಡಿದೆ.ಅಮೆರಿಕದ ಜೊತೆ ವಾಣಿಜ್ಯ ಮಾತುಕತೆಗಳ ಆರಂಭಗೊಳ್ಳುವುದಕ್ಕೆ ಪೂರ್ವಭಾವಿಯಾಗಿ ಭಾರತವು ಬರ್ಬೋನ್ ವಿಸ್ಕಿ ಸೇರಿದಂತೆ ಹಲವಾರು ಅಮೆರಿಕ ಉತ್ಪನ್ನಗಳಿಗೆ ಮೇಲಿನ ಸುಂಕವನ್ನು ಕಡಿತಗೊಳಿಸಿತ್ತು.
ಇದಲ್ಲದೆ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ಸೋಮವಾರ ಅಮೆರಿಕ ಪ್ರವಾಸವನ್ನು ಆರಂಭಿಸಿದ್ದು, ಟ್ರಂಪ್ ಅವರ ನೂತನ ಸುಂಕ ಯೋಜನೆಯನ್ನು ಜಾರಿಗೊಳಿಸುವ ಹೊಣೆ ಹೊತ್ತಿರುವ ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್ಟಿಆರ್) ಜೆಮಿಸನ್ ಗ್ರೀರ್ ಅವರನ್ನು ಭೇಟಿಯಾಗಲಿದ್ದಾರೆ.
ಅಮೆರಿಕವು ನೆರೆಹೊರೆಯ ರಾಷ್ಟ್ರಗಳು ಹಾಗೂ ತನ್ನ ಅತಿ ದೊಡ್ಡ ವ್ಯಾಪಾರಿ ಪಾಲುದಾರರಾದ ಕೆನಡ ಹಾಗೂ ಮೆಕ್ಸಿಕೋ ದೇಶಗಳ ಮೇಲೆ ಶೇ.25ರಷ್ಟು ಸುಂಕಗಳನ್ನು ವಿಧಿಸಲು ಅಮೆರಿಕ ನಿರ್ಧರಿಸಿದ ಮರುದಿನವೇ ಈ ಘೋಷಣೆ ಹೊರಬಿದ್ದಿದೆ.ಅಷ್ಟೇ ಅಲ್ಲದೆ ಚೀನಿ ಉತ್ಪನ್ನಗಳ ಮೇಲಿನ ಸುಂಕವನ್ನು ಕೂಡಾ ಶೇ.10ರಿಂದ 20ಕ್ಕೇರಿಸುವ ಮೂಲಕ ದುಪ್ಪಟ್ಟುಗೊಳಿಸಿದೆ.