ಕದನ ವಿರಾಮಕ್ಕೆ ಒಪ್ಪದಿದ್ದರೆ ವ್ಯಾಪಕ ನಿರ್ಬಂಧ: ರಶ್ಯಕ್ಕೆ ಟ್ರಂಪ್ ಬೆದರಿಕೆ

PC : PTI
ವಾಷಿಂಗ್ಟನ್: ಉಕ್ರೇನ್ ಶಾಂತಿ ಒಪ್ಪಂದಕ್ಕೆ ಸಮ್ಮತಿಸುವವರೆಗೆ ರಶ್ಯದ ವಿರುದ್ಧ ವ್ಯಾಪಕ ನಿರ್ಬಂಧ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಯುದ್ಧರಂಗದಲ್ಲಿ ಈಗ ರಶ್ಯವು ಉಕ್ರೇನ್ ಮೇಲೆ ಕ್ಷಿಪಣಿಗಳ ಮಳೆಗರೆಯುತ್ತಿರುವ ಹಿನ್ನೆಲೆಯಲ್ಲಿ, ರಶ್ಯದ ವಿರುದ್ಧ ವ್ಯಾಪಕ ಬ್ಯಾಂಕಿಂಗ್ ನಿರ್ಬಂಧ, ನಿರ್ಬಂಧಗಳು ಮತ್ತು ಸುಂಕ ವಿಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇವೆ. ಕದನ ವಿರಾಮ ಹಾಗೂ ಶಾಂತಿ ಸ್ಥಾಪನೆಗೆ ಒಪ್ಪಂದ ಪೂರ್ಣಗೊಳ್ಳುವವರೆಗೆ ರಶ್ಯದ ವಿರುದ್ಧ ವ್ಯಾಪಕ ನಿರ್ಬಂಧ ಜಾರಿಗೊಳ್ಳಬೇಕು. ರಶ್ಯ ಮತ್ತು ಉಕ್ರೇನ್ಗೆ- ಕೈ ಮೀರುವ ಮುನ್ನ ತಕ್ಷಣ ಮಾತುಕತೆಗೆ ಮುಂದಾಗಿ ' ಎಂದವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ಮೂರು ತಿಂಗಳ ಹಿಂದೆ ರಶ್ಯದ ಕಸ್ರ್ಕ್ ಪ್ರದೇಶದೊಳಗೆ ನುಗ್ಗಿ ಕೆಲವು ಭಾಗಗಳನ್ನು ನಿಯಂತ್ರಣಕ್ಕೆ ಪಡೆದಿದ್ದ ಉಕ್ರೇನ್ ಪಡೆಗಳ ಎದುರು ಈಗ ರಶ್ಯದ ಪಡೆಗಳ ಕೈ ಮೇಲಾಗಿದ್ದು ಉಕ್ರೇನ್ ನ ಸಾವಿರಾರು ಯೋಧರು ರಶ್ಯದ ಪಡೆಗಳಿಂದ ಸುತ್ತುವರಿದಿದ್ದಾರೆ. ಉಕ್ರೇನ್ ನ ಪಡೆಗಳನ್ನು ಎರಡು ಭಾಗಗಳಾಗಿ ಪ್ರತ್ಯೇಕಿಸುವಲ್ಲಿ ರಶ್ಯದ ಸೇನೆ ಯಶಸ್ವಿಯಾಗಿದ್ದು ಪರಸ್ಪರ ಸಂಪರ್ಕ ಸಾಧ್ಯವಾಗದೆ ಉಕ್ರೇನ್ ಯೋಧರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.