ಪರಮಾಣು ಸಬ್ಮೆರಿನ್ ರಹಸ್ಯವನ್ನು ಟ್ರಂಪ್ ಆಸ್ಟ್ರೇಲಿಯಾ ಉದ್ಯಮಿಗೆ ತಿಳಿಸಿದ್ದರು: ವರದಿ
ಡೊನಾಲ್ಡ್ ಟ್ರಂಪ್ | Photo: NDTV
ವಾಷಿಂಗ್ಟನ್ : ಅಮೆರಿಕದ ಪರಮಾಣು ಜಲಾಂತರ್ಗಾಮಿ ನೌಕೆಗಳ ಕುರಿತ ರಹಸ್ಯ ಮಾಹಿತಿಯನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಟ್ರೇಲಿಯಾದ ಉದ್ಯಮಿಯೊಂದಿಗೆ ಹಂಚಿಕೊಂಡಿದ್ದರು ಎಂದು `ನ್ಯೂಯಾರ್ಕ್ ಟೈಮ್ಸ್' ಗುರುವಾರ ವರದಿ ಮಾಡಿದೆ.
ಅಧಿಕಾರವನ್ನು ತೊರೆದ ಕೆಲ ಸಮಯಗಳ ಬಳಿಕ ಫ್ಲೋರಿಡಾದಲ್ಲಿನ ತಮ್ಮ ಖಾಸಗಿ ಕಚೇರಿಯಲ್ಲಿ ಆಸ್ಟ್ರೇಲಿಯಾದ ಕೋಟ್ಯಾಧಿಪತಿ ಉದ್ಯಮಿ ಆ್ಯಂಥನಿ ಪ್ರಾಟ್ ಜತೆಗಿನ ಮಾತುಕತೆ ಸಂದರ್ಭ ಅಮೆರಿಕದ ಪರಮಾಣು ಜಲಾಂತರ್ಗಾಮಿ ನೌಕೆಯ ಕುರಿತ ರಹಸ್ಯ ಮಾಹಿತಿಯನ್ನು ಟ್ರಂಪ್ ಹಂಚಿಕೊಂಡಿದ್ದರು. ಬಳಿಕ ಪ್ರಾಟ್ ಈ ರಹಸ್ಯ ಮಾಹಿತಿಯನ್ನು ತಮ್ಮ ಸಂಸ್ಥೆಯ ಕೆಲವು ಸಿಬಂದಿಗಳು, ಪತ್ರಕರ್ತರು, ವಿದೇಶಿ ಅಧಿಕಾರಿಗಳ ಸಹಿತ ಹಲವರಿಗೆ ನೀಡಿದ್ದರು . ಟ್ರಂಪ್ ಅವರ ಈ ಕೃತ್ಯವು ಅಮೆರಿಕ ಪರಮಾಣು ನೌಕಾಪಡೆಗೆ ಅಪಾಯದ ಸಾಧ್ಯತೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
2021ರ ಎಪ್ರಿಲ್ನಲ್ಲಿ ಟ್ರಂಪ್ರನ್ನು ಭೇಟಿಯಾಗಿದ್ದ ಪ್ರಾಟ್, ಆಸ್ಟ್ರೇಲಿಯಾವು ಅಮೆರಿಕದಿಂದ ಪರಮಾಣು ಜಲಾಂತರ್ಗಾಮಿಯನ್ನು ಖರೀದಿಸಲು ಆಸಕ್ತಿ ತೋರಬಹುದು ಎಂದಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ಅಮೆರಿಕದ ಜಲಾಂತರ್ಗಾಮಿ ನೌಕೆಗಳು ವಾಡಿಕೆಯಂತೆ ಸಾಗಿಸುವ ಪರಮಾಣು ಸಿಡಿತಲೆಗಳ ನಿಖರವಾದ ಸಂಖ್ಯೆ, ಪತ್ತೆಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಈ ನೌಕೆಗಳು ಯಾವ ರೀತಿ ರಶ್ಯದ ಸಬ್ಮೆರಿನ್ಗಳನ್ನು ತಲುಪಬಹುದು ಎಂದು ವಿವರಿಸಿದ್ದರು ಎಂದು ವರದಿಯಾಗಿದೆ.
ಅಧಿಕಾರ ತೊರೆದ ಬಳಿಕ ತಮ್ಮ ಖಾಸಗಿ ನಿವಾಸದಲ್ಲಿ ರಹಸ್ಯ ದಾಖಲೆಗಳನ್ನು ಇರಿಸಿಕೊಂಡಿರುವ ಬಗ್ಗೆ ಟ್ರಂಪ್ರನ್ನು ಈಗಾಗಲೇ ವಿಚಾರಣೆ ನಡೆಸಿರುವ ಫೆಡರಲ್ ಪ್ರಾಸಿಕ್ಯೂಟರ್ಗಳು ಪ್ರಕರಣದ ಬಗ್ಗೆ ಪ್ರಾಟ್ರನ್ನು ಎರಡು ಬಾರಿ ವಿಚಾರಣೆ ನಡೆಸಿದ್ದಾರೆ. ವರ್ಗೀಕೃತ ದಾಖಲೆ ಪ್ರಕರಣಗಳ ಹೊರತಾಗಿ ಟ್ರಂಪ್ ಇತರ ಮೂರು ದೋಷಾರೋಪಣೆಗಳನ್ನು ಎದುರಿಸುತ್ತಿದ್ದಾರೆ.