ಯುದ್ಧವನ್ನು ರಶ್ಯ ಆರಂಭಿಸಿರಬಹುದು, ಆದರೆ ಉಕ್ರೇನ್ ತಡೆಯಬಹುದಿತ್ತು: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ರಶ್ಯದೊಂದಿಗೆ ಯುದ್ಧವನ್ನು ಉಕ್ರೇನ್ ಆರಂಭಿಸಬಾರದಿತ್ತು ಎಂಬ ಹೇಳಿಕೆಗೆ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಯುದ್ಧವನ್ನು ರಶ್ಯವೇ ಪ್ರಾರಂಭಿಸಿರಬಹುದು. ಆದರೆ ಯುದ್ಧ ಪ್ರಾರಂಭಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯುವ ಎಲ್ಲಾ ಅವಕಾಶಗಳೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರ ಎದುರಿತ್ತು' ಎಂದಿದ್ದಾರೆ.
`ಹೌದು, ರಶ್ಯ ಆಕ್ರಮಣ ನಡೆಸಿದೆ. ಆದರೆ ಏನೂ ಕಾರಣವಿಲ್ಲದೆ ಪುಟಿನ್ ದಾಳಿ ಮಾಡಿದ್ದಾರೆಯೇ? ಯುದ್ಧದ ಆಯ್ಕೆಯಿಂದ ಅವರನ್ನು ದೂರ ಸರಿಸುವ ಅವಕಾಶ ನಿಮ್ಮ ಎದುರಿತ್ತು. ನೀವು ಮನಸ್ಸು ಮಾಡಿದ್ದರೆ ಯುದ್ಧವೇ ಪ್ರಾರಂಭವಾಗುತ್ತಿರಲಿಲ್ಲ. ಪ್ರತೀ ಬಾರಿಯೂ ನಾನು ಹೇಳುತ್ತೇನೆ `ಇದು ರಶ್ಯದ ತಪ್ಪಲ್ಲ'. ಆದರೆ ಬೈಡನ್(ಅಮೆರಿಕದ ಮಾಜಿ ಅಧ್ಯಕ್ಷ) ತಪ್ಪು ಹೇಳಿಕೆ ನೀಡಿದರು, ಝೆಲೆನ್ಸ್ಕಿಯೂ ತಪ್ಪು ಹೇಳಿಕೆ ನೀಡಿದ್ದರು ಮತ್ತು ಇದರಿಂದ ಉಕ್ರೇನ್ ಆಕ್ರಮಣಕ್ಕೆ ಒಳಗಾಯಿತು. ಇದು ಕೆಟ್ಟ ವಿದ್ಯಮಾನ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ರಶ್ಯದೊಂದಿಗೆ ಮಾತನಾಡಿದ್ದರೆ ಇದೆಲ್ಲಾ ಆಗುತ್ತಲೇ ಇರಲಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಶ್ಲಾಘಿಸಿದ ಟ್ರಂಪ್ `ಅವರು ಉಕ್ರೇನ್ ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ಅವರು ಕದನ ವಿರಾಮ ಒಪ್ಪಂದಕ್ಕೆ ಸಿದ್ಧವಿದ್ದಾರೆ. ಅವರು ಮನಸ್ಸು ಮಾಡಿದರೆ ಉಕ್ರೇನ್ ದೇಶವನ್ನೇ ವಶಕ್ಕೆ ಪಡೆಯಬಹುದಿತ್ತು. ಆದರೆ ಅವರು ಕದನ ವಿರಾಮ ಬಯಸುತ್ತಿದ್ದಾರೆ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.