ಟ್ರಂಪ್ ಅಧ್ಯಕ್ಷರಾಗಲು ಅನರ್ಹ : ಕಮಲಾ ಹ್ಯಾರಿಸ್ ವಾಗ್ದಾಳಿ
Photo : Reuters
ವಾಷಿಂಗ್ಟನ್: ತಮ್ಮ ಪ್ರತಿಸ್ಪರ್ಧಿ ಹಾಗೂ ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ದೇಶವನ್ನು ಮುನ್ನಡೆಸಲು ಅಸಮರ್ಥರು ಎಂದು ಟೀಕಿಸಿದ್ದಾರೆ.
“ನನಗೆ ಅಡಾಲ್ಫ್ ಹಿಟ್ಲರ್ ಹೊಂದಿದ್ದಂತಹ ಜನರಲ್ ಗಳು ಬೇಕು ಎಂದು ಮಾಜಿ ಸಿಬ್ಬಂದಿ ಮುಖ್ಯಸ್ಥ ಹಾಗೂ ನಿವೃತ್ತ ಜನರಲ್ ಜಾನ್ ಕೆಲ್ಲಿ ಅವರಿಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಕೇಳಿದ್ದರು ಎಂಬುದು ನನಗೆ ನಿನ್ನೆ ತಿಳಿದು ಬಂದಿತು” ಎಂದು ವಾಷಿಂಗ್ಟನ್ ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ.
“ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕ ಸಂವಿಧಾನಕ್ಕೆ ನಿಷ್ಠವಾಗಿರುವ ಸೇನೆಗಿಂತ, ತನಗೆ ನಿಷ್ಠವಾಗಿರುವ ಸೇನೆ ಬೇಕಿದೆ. ಅವರಿಗೆ ತಮ್ಮ ಆದೇಶಗಳನ್ನು ಪಾಲಿಸುವ, ಕಾನೂನನ್ನು ಉಲ್ಲಂಘಿಸಿರಿ ಅಥವಾ ಅಮೆರಿಕ ಸಂವಿಧಾನದ ಮೇಲೆ ತಾವು ಮಾಡಿರುವ ಪ್ರಮಾಣವನ್ನು ತ್ಯಜಿಸಿ ಎಂದು ಹೇಳಿದಾಗ, ಅದನ್ನು ಕೇಳುವ ಸೇನೆ ಬೇಕಿದೆ” ಎಂದು ಅವರು ಆರೋಪಿಸಿದ್ದಾರೆ.
“ಕಳೆದ ಒಂದು ವಾರದಲ್ಲೇ ಅವರು ಸ್ವತಃ ಅಮೆರಿಕನ್ನರನ್ನು ತಮ್ಮ ಶತ್ರುಗಳು ಎಂದು ಕರೆದಿದ್ದಾರೆ ಹಾಗೂ ಅಮೆರಿಕ ಪ್ರಜೆಗಳ ವಿರುದ್ಧವೇ ಅಮೆರಿಕ ಸೇನೆಯನ್ನು ಬಳಸುವ ಕುರಿತು ಮಾತನಾಡಿದ್ದಾರೆ” ಎಂದೂ ಅವರು ಆರೋಪಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಮಾಜಿ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಕೆಲ್ಲಿ, ಟ್ರಂಪ್ ವಿರುದ್ಧ ಮಾತನಾಡಿದ ಮರುದಿನವೇ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಮೇಲಿನಂತೆ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ರಂದು ನಡೆಯಲಿದೆ.