ಅಮೆರಿಕಕ್ಕೆ ʼಹಾನಿʼಯುಂಟು ಮಾಡುವ ದೇಶಗಳ ಮೇಲೆ ಅಧಿಕ ಸುಂಕ ವಿಧಿಸುತ್ತೇವೆ: ಟ್ರಂಪ್ ಎಚ್ಚರಿಕೆ
ಭಾರತ, ಚೀನಾವನ್ನು ಉಲ್ಲೇಖಿಸಿದ ಅಮೆರಿಕ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್: ಚೀನಾ, ಭಾರತ ಮತ್ತು ಬ್ರೆಝಿಲ್ ಹೆಚ್ಚು ಸುಂಕ ವಿಧಿಸುತ್ತಿರುವ ದೇಶಗಳು ಎಂದು ಹೆಸರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಕ್ಕೆ ಹಾನಿಯುಂಟು ಮಾಡುವ ದೇಶಗಳ ಮೇಲೆ ಅಧಿಕ ಸುಂಕ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
“ಅಮೆರಿಕಕ್ಕೆ ಹಾನಿಯುಂಟು ಮಾಡುವ ಹೊರ ದೇಶಗಳು ಹಾಗೂ ಪರಕೀಯರ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತೇವೆ. ನಮಗೆ ಅದು ಹಾನಿ ಎನಿಸುತ್ತದೆ. ಆದರೆ, ಮೂಲಭೂತವಾಗಿ ಅವರು ಅವರ ದೇಶಗಳಿಗೆ ಒಳಿತನ್ನು ಮಾಡುವ ಉದ್ದೇಶ ಹೊಂದಿರುತ್ತಾರೆ” ಎಂದು ಫ್ಲೋರಿಡಾದಲ್ಲಿ ರಿಬ್ಲಿಕನ್ನರನ್ನು ಉದ್ದೇಶಿಸಿ ಹೇಳಿದ್ದಾರೆ.
“ಬೇರೆ ದೇಶಗಳು ಏನು ಮಾಡುತ್ತಿವೆ ಎಂಬುದನ್ನು ನೋಡಿ. ಚೀನಾ ಪ್ರಚಂಡ ತೆರಿಗೆ ವಿಧಿಸುತ್ತಿದೆ. ಭಾರತ ಮತ್ತು ಬ್ರೆಝಿಲ್ ಸೇರಿದಂತೆ ಹಲವು ದೇಶಗಳು ಇದೇ ಹಾದಿಯಲ್ಲಿವೆ. ಆದ್ದರಿಂದ, ಇನ್ನು ಮುಂದೆ ನಾವು ಹಾಗೆ ಆಗಲು ಬಿಡುವುದಿಲ್ಲ. ಏಕೆಂದರೆ, ನಮಗೆ ಅಮೆರಿಕವೇ ಮೊದಲು” ಎಂದು ಅವರು ಘೋಷಿಸಿದ್ದಾರೆ.
“ನಮ್ಮ ಬೊಕ್ಕಸಕ್ಕೆ ಹಣ ಬರಲಿದೆ ಹಾಗೂ ಅಮೆರಿಕವು ಮತ್ತೆ ಶ್ರೀಮಂತವಾಗಲು ಅತ್ಯಂತ ನ್ಯಾಯಯುತ ವ್ಯವಸ್ಥೆಯನ್ನು ನಾವು ಸ್ಥಾಪಿಸುತ್ತೇವೆ. ಅದೂ ಆದಷ್ಟೂ ಶೀಘ್ರ” ಎಂದು ಅವರು ಹೇಳಿದ್ದಾರೆ.
“ಹಿಂದೆಂದಿಗಿಂತಲೂ ಶ್ರೀಮಂತ ಹಾಗೂ ಶಕ್ತಿಯುತ ವ್ಯವಸ್ಥೆಗೆ ಅಮೆರಿಕ ಮರಳಲು ಇದು ಸಕಾಲವಾಗಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.