ಪುಟಿನ್ ಗೆ ಟ್ರಂಪ್ ಕರೆ ಮಾಡಿದ್ದಾರೆಂಬುದು ಶುದ್ಧ ಕಟ್ಟುಕಥೆಯಾಗಿದೆ: ರಷ್ಯಾ
ಡೊನಾಲ್ಡ್ ಟ್ರಂಪ್, ವ್ಲಾದಿಮಿರ್ ಪುಟಿನ್ | PTI
ರಷ್ಯಾ: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಉಕ್ರೇನ್ ಯುದ್ಧವನ್ನು ಮತ್ತಷ್ಟು ಉಲ್ಬಣಗೊಳಿಸಬಾರದು ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ವ್ಲಾದಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ. ಮಾಧ್ಯಮ ವರದಿಗಳು ಸುಳ್ಳು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಕರೆ ಮಾಡಿ ಮಾತನಾಡಿರುವುದನ್ನು ಡಿಮಿಟ್ರಿ ಪೆಸ್ಕೋವ್ ನಿರಾಕರಿಸಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಮತ್ತು ರಾಯಿಟರ್ಸ್ ಎರಡೂ ಮಾಧ್ಯಮಗಳು ಅಪರಿಚಿತ ಮೂಲಗಳನ್ನು ಉಲ್ಲೇಖಿಸಿ ಈ ಬಗ್ಗೆ ವರದಿ ಮಾಡಿತ್ತು. ಆದರೆ ವರದಿಯು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದ್ದು, ಕಟ್ಟುಕಥೆಯಾಗಿದೆ ಎಂದು ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಡಿಮಿಟ್ರಿ ಪೆಸ್ಕೋವ್ ಮಾಧ್ಯಮಗಳ ಮಾಹಿತಿಯ ಗುಣಮಟ್ಟವನ್ನು ಟೀಕಿಸಿದ್ದು, ಪ್ರತಿಷ್ಠಿತ ಮಾಧ್ಯಮಗಳು ಕೆಲವೊಮ್ಮೆ ಪರಿಶೀಲಿಸದೆ ವರದಿಗಳನ್ನು ಪ್ರಕಟಿಸುತ್ತಿದೆ ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿನ ಯುದ್ಧವು ಕಳೆದ 2 ವರ್ಷಗಳಿಂದ ಮುಂದುವರಿದಿದ್ದು, ಜಾಗತಿಕವಾಗಿ ಪ್ರಮುಖ ಸಮಸ್ಯೆಯಾಗಿ ಪರಿಗಣಿಸಲ್ಪಟ್ಟಿದೆ. ಅಮೆರಿಕಾದಲ್ಲಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಮಾತನಾಡುತ್ತಾ, ಗೆದ್ದರೆ 24 ಗಂಟೆಗಳಲ್ಲಿ ಉಕ್ರೇನ್ನಲ್ಲಿ ಶಾಂತಿ ಸ್ಥಾಪಿಸುವುದಾಗಿ ಹೇಳಿಕೊಂಡಿದ್ದರು.