ಗಾಝಾದಲ್ಲಿ ಮಾನವೀಯ ದುರಂತ: ಇಸ್ರೇಲ್ ಜತೆಗಿನ ಎಲ್ಲ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಿದ ಟರ್ಕಿ
ರಿಸೆಫ್ ತಯ್ಯಿಪ್ ಎರ್ದೊಗಾನ್ | PC : NDTV
ಅಂಕಾರಾ, ಟರ್ಕಿ: ಗಾಝಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಮಾನವೀಯ ಪರಿಸ್ಥಿತಿ ಹದಗೆಡುತ್ತಿದೆ ಎಂಬ ಕಾರಣ ನೀಡಿ ಇಸ್ರೇಲ್ ದೇಶದ ಜತೆಗಿನ ಎಲ್ಲ ವ್ಯಾಪಾರ ಸಂಬಂಧಗಳನ್ನು ಟರ್ಕಿ ಸ್ಥಗಿತಗೊಳಿಸಿದೆ.
ಗಾಝಾ ಪ್ರದೇಶಕ್ಕೆ ತಡೆರಹಿತ ಮತ್ತು ಸಮರ್ಪಕ ನೆರವು ಸಾಮಗ್ರಿಗಳನ್ನು ಪೂರೈಸಲು ಇಸ್ರೇಲ್ ಅನುವು ಮಾಡಿಕೊಡುವವರೆಗೂ ಈ ಕ್ರಮ ಮುಂದುವರಿಯಲಿದೆ ಎಂದು ಟರ್ಕಿ ವ್ಯಾಪಾರ ಸಚಿವಾಲಯ ಹೇಳಿಕೆ ನೀಡಿದೆ. ಉಭಯ ದೇಶಗಳ ನಡುವೆ ಕಳೆದ ವರ್ಷ 7 ಶತಕೋಟಿ ಡಾಲರ್ ಮೌಲ್ಯದ ಸರಕುಗಳ ವಹಿವಾಟು ನಡೆದಿತ್ತು.
ಏತನ್ಮಧ್ಯೆ ಟರ್ಕಿ ಅಧ್ಯಕ್ಷ ರಿಸೆಫ್ ತಯ್ಯಿಪ್ ಎರ್ದೊಗಾನ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವರು ಆಪಾದಿಸಿದ್ದಾರೆ.
ಇಸ್ರೇಲ್ ಕಟ್ಸ್ ಎಕ್ಸ್ ಪೋಸ್ಟ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, "ಟರ್ಕಿ ಜನತೆಯ ಮತ್ತು ವ್ಯಾಪಾರಿಗಳ ಹಿತಾಸಕ್ತಿಯನ್ನು ಹಾಳುಗೆಡವುತ್ತಿದೆ; ಜತೆಗೆ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಗಳನ್ನು ಕಡೆಗಣಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಟರ್ಕಿ ಜತೆಗಿನ ವ್ಯಾಪಾರಕ್ಕೆ ಪರ್ಯಾಯವನ್ನು ಕಂಡುಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಸ್ಥಳೀಉ ಉತ್ಪಾದನೆ ಮತ್ತು ಇತರ ದೇಶಗಳಿಂದ ಆಮದು ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಟರ್ಕಿ ಮತ್ತು ಪ್ಯಾಲೆಸ್ತೇನಿಯನ್ ಅಥಾರಿಟಿ ಹಾಗೂ ಗಾಜಾ ಜತೆಗಿನ ಆರ್ಥಿಕ ಸಂಬಂಧಗಳನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದಾರೆ.