ಉತ್ತರ ಸಿರಿಯಾ | ಟರ್ಕಿ ಸೇನೆಯಿಂದ 21 ಕುರ್ದಿಷ್ ಹೋರಾಟಗಾರರ ಹತ್ಯೆ
ಸಾಂದರ್ಭಿಕ ಚಿತ್ರ | PC : PTI
ಅಂಕಾರ : ಉತ್ತರ ಸಿರಿಯಾ ಮತ್ತು ಇರಾಕ್ನಲ್ಲಿ ಟರ್ಕಿಯ ಮಿಲಿಟರಿ ನಡೆಸಿದ ದಾಳಿಯಲ್ಲಿ 21 ಕುರ್ದಿಷ್ ಹೋರಾಟಗಾರರು ಹತರಾಗಿದ್ದಾರೆ ಎಂದು ಟರ್ಕಿಯ ರಕ್ಷಣಾ ಇಲಾಖೆ ಬುಧವಾರ ಹೇಳಿದೆ.
ಉತ್ತರ ಸಿರಿಯಾದಲ್ಲಿ ಆಕ್ರಮಣ ನಡೆಸಲು ಸಿದ್ಧತೆ ನಡೆಸುತ್ತಿದದ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ) ಮತ್ತು ಸಿರಿಯನ್ಕುರ್ದಿಶ್ ಸಶಸ್ತ್ರ ಹೋರಾಟಗಾರರ ಗುಂಪು ವೈಪಿಜಿಗೆ ಸೇರಿದ 20 ಸಶಸ್ತ್ರ ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ. ಉತ್ತರ ಇರಾಕ್ ನಲ್ಲಿ ಒಬ್ಬ ಹೋರಾಟಗಾರನನ್ನು ಹತ್ಯೆ ಮಾಡಲಾಗಿದೆ. ನಮ್ಮ ಕಾರ್ಯಾಚರಣೆ ದೃಢವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯಲಿದೆ ಎಂದು ಹೇಳಿಕೆ ತಿಳಿಸಿದೆ.
ಬಂಡುಕೋರ ಸಂಘಟನೆ ಎಂದು ಟರ್ಕಿ, ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕ ಗುರುತಿಸಿರುವ ಪಿಕೆಕೆ 1984ರಲ್ಲಿ ಟರ್ಕಿ ದೇಶದ ವಿರುದ್ಧ ಸಶಸ್ತ್ರ ದಂಗೆಯನ್ನು ಪ್ರಾರಂಭಿಸಿದ್ದು ಈ ಸಂಘರ್ಷದಲ್ಲಿ ಇದುವರೆಗೆ 40,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಬೆಂಬಲಿಯ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್(ಎಸ್ಡಿಎಫ್)ನ ಒಂದು ಬಣವಾಗಿರುವ ವೈಪಿಜಿಯು ಪಿಕೆಕೆಯ ಅಂಗಸಂಸ್ಥೆ ಎಂದು ಟರ್ಕಿ ಪರಿಗಣಿಸಿದ್ದು ಅದನ್ನೂ ಬಂಡುಕೋರ ಸಂಘಟನೆ ಎಂದು ಗುರುತಿಸಿದೆ.