ಪಾಕ್ ಅಭ್ಯರ್ಥಿಗಳ ಚುನಾವಣಾ ಕಚೇರಿಗಳಲ್ಲಿ ಅವಳಿ ಬಾಂಬ್ ಸ್ಫೋಟ; ಕನಿಷ್ಠ 26 ಬಲಿ
30ಕ್ಕೂ ಅಧಿಕ ಮಂದಿಗೆ ಗಾಯ
Photo:NDTV
ಇಸ್ಲಾಮಾಬಾದ್: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಮುನ್ನಾ ದಿನವಾದ ಗುರುವಾರ ನೈಋತ್ಯ ಪ್ರಾಂತ ಬಲೂಚಿಸ್ತಾನದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಕ್ಕೆ ಕನಿಷ್ಠ 26 ಮಂದಿ ಬಲಿಯಾಗಿದ್ದಾರೆ ಹಾಗೂ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪಾಶಿನ್ ಜಿಲ್ಲೆಯಲ್ಲಿ ಅಭ್ಯರ್ಥಿ ಅಶ್ಫಾಂಡ್ಯಾರ್ ಖಾನ್ ಅರ ಚುನಾವಣಾ ಪ್ರಚಾರ ಕಚೇರಿಯಲ್ಲಿ ಮೊದಲ ಬಾಂಬ್ ಸ್ಪೋಟಿಸಿದ್ದು, ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ನ್ ಜಿಲ್ಲಾ ಉಪ ಆಯುಕ್ತ ಜುಮ್ಮಾ ದಾದ್ ಖಾನ್ ತಿಳಿಸಿದ್ದಾರೆ.
ಖಿಲಾ ಸೈಫುಲ್ಲಾ ಪಟ್ಟಣದಲ್ಲಿ ಬುಧವಾರ ಸಂಜೆ ಜಮೀಯತ್ ಉಲೇಮಾ ಇಸ್ಲಾಮ್ (ಜೆಯುಐ)ಪಕ್ಷದ ಅಭ್ಯರ್ಥಿ ಫಝ್ಲುರ್ ರಹ್ಮಾನ್ ಅವರ ಚುನಾವಣಾ ಪ್ರಚಾರ ಕಚೇರಿಯಲ್ಲಿ ಬಾಂಬ್ ಸ್ಫೋಟಿಸಿ, 11 ಮಂದಿ ಸಾವನ್ನಪ್ಪಿದ್ದಾರೆ.
ಈ ಎರಡೂ ದಾಳಿಗಳ ಹಿಂದೆ ಯಾರ ಕೈವಾಡವಿದೆಯೆಂದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ಈ ಪ್ರಾಂತದಲ್ಲಿ ಹಲವಾರು ಉಗ್ರಗಾಮಿ ಗುಂಪುಗಳು ಹಾಗೂ ಬಲೂಚಿಸ್ತಾನದ ಪ್ರತ್ಯೇಕವಾದಿ ಸಂಘಟನೆಗಳು ಇತ್ತೀಚಿನ ತಿಂಗಳುಗಳಲ್ಲಿ ದಾಳಿಗಳನ್ನು ನಡೆಸಿವೆ. ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಬುಧವಾರ ಪ್ರಚಾರ ಕೊನೆಗೊಂಡಿತ್ತು.