ಇಸ್ರೇಲ್ ಸೈನಿಕರಿಂದ ಗುಂಡಿಕ್ಕಿ ಇಬ್ಬರು ಬಾಲಕರ ಹತ್ಯೆ
Photo: NDTV
ರಮಲ್ಲಾ : ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಬುಧವಾರ ಎಂಟು ವರ್ಷದ ಬಾಲಕ ಹಾಗೂ ಓರ್ವ ಹದಿಹರೆಯದ ಹುಡುಗನನ್ನು ಇಸ್ರೇಲ್ ಸೈನಿಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಎಂಟು ವರ್ಷದ ಆದಮ್ ಅಲ್ ಘುಲ್ ಹಾಗೂ 15 ವರ್ಷಗಳ ಬಾಲಕ ಬಾಸ್ಸೆಮ್ ಅಬು ಎಲ್-ವಾಫಾ ಅವರನ್ನು ಅತಿಕ್ರಮಣಕಾರರ ಬುಲೆಟ್ಗಳಿಗೆ ಬಲಿಯಾಗಿದ್ದಾರೆ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಗುಂಡೇಟಿಗೆ ಒಳಗಾದ ಬಾಲಕನು ರಸ್ತೆಯಲ್ಲಿ ಬಿದ್ದಿರುವ ಹಾಗೂ ಭಯಭೀತ ಮಕ್ಕಳು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯಗಳ ಸಿಸಿಟಿವಿ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನೊಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ಹದಿಹರೆಯದ ಹುಡುಗನೊಬ್ಬ ಗುಂಡೆಸತದಿಂದಾಗಿ ನೆಲಕ್ಕೆ ಬಿದ್ದಿರುವುದನ್ನು ಹಾಗೂ ನೆರವಿಗಾಗಿ ಅಂಗಲಾಚುತ್ತಿದ್ದ ಆತನ ಮೇಲೆ ಸೈನಿಕರು ಮತ್ತೆ ಮತ್ತೆ ಗುಂಡುಹಾರಿಸಿರುವುದು ಕಂಡುಬಂದಿದೆ.
ಹದಿಹರೆಯದ ಬಾಲಕನು ಸುಮಾರು ಅರ್ಧ ನಿಮಿಷದವರೆಗೆ ವಿಲವಿಲನೆ ಒದ್ದಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಫೆಲೆಸ್ತೀನ್ನ ಬಾಲಕ ಹಾಗೂ ಹದಿಹರೆಯದ ಹುಡುಗ ಇಬ್ಬರೂ ಇಸ್ರೇಲ್ ಸೇನೆಯ ವ್ಯಾಪ್ತಿಗೆ ಬಾರದ ಹಾಗೂ ಫೆಲೆಸ್ತೀನ್ ಆಡಳಿತ ಪ್ರಾಧಿಕಾರ ನಿಯಂತ್ರಿತ ಪ್ರದೇಶದಲ್ಲಿರುವ ಮಧ್ಯ ಜೆನಿನ್ನ ಪಕ್ಕದ ಬೀದಿಯೊಂದರಲ್ಲಿ ಇದ್ದಾಗ ಅವರ ಮೇಲೆ ಇಸ್ರೇಲಿ ಸೈನಿಕರು ಗುಂಡುಹಾರಿಸಿದ್ದಾರೆಂದು ಪೆಲೆಸ್ತೀನ್ ರೆಡ್ಕ್ರಿಸೆಂಟ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.