ಯಮನ್ ಬಳಿ ಕ್ಷಿಪಣಿ ದಾಳಿ: ಎರಡು ಹಡಗುಗಳಿಗೆ ಬೆಂಕಿ
ಸನಾ, ಜೂ.9: ಯಮನ್ ಬಳಿಯ ಏಡನ್ ಕೊಲ್ಲಿಯ ಮೂಲಕ ಸಾಗುತ್ತಿದ್ದ ಎರಡು ಹಡಗುಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದ ಬಳಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಬ್ರಿಟನ್ನ ಸಮುದ್ರ ಭದ್ರತಾ ಸಂಸ್ಥೆ `ಆ್ಯಂಬ್ರೆ' ರವಿವಾರ ಮಾಹಿತಿ ನೀಡಿದೆ.
ಆಂಟಿಗುವ ಮತ್ತು ಬಾರ್ಬಡೋಸ್ ಧ್ವಜ ಹೊಂದಿದ್ದ ಸರಕು ಸಾಗಣೆ ನೌಕೆ ಏಡನ್ನ ಆಗ್ನೇಯಕ್ಕೆ 83 ನಾಟಿಕಲ್ ಮೈಲು ದೂರದಲ್ಲಿದ್ದಾಗ ಹಡಗಿನ ಬಳಿ ಕ್ಷಿಪಣಿ ಅಪ್ಪಳಿಸಿದ್ದು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಹಡಗು ಏಡನ್ ಕೊಲ್ಲಿಯ ಮೂಲಕ ನೈಋತ್ಯದತ್ತ ಸಾಗುತ್ತಿತ್ತು ಎಂದು ವರದಿಯಾಗಿದೆ.
ಮತ್ತೊಂದು ಕ್ಷಿಪಣಿಯನ್ನೂ ಉಡಾಯಿಸಲಾಗಿದ್ದು ಆದರೆ ಅದು ಹಡಗಿಗಿಂತ ದೂರದಲ್ಲಿ ಅಪ್ಪಳಿಸಿದೆ. ಕ್ಷಿಪಣಿ ದಾಳಿಯ ಬೆನ್ನಲ್ಲೇ ಸಣ್ಣ ದೋಣಿಯಲ್ಲಿ ಧಾವಿಸಿ ಬಂದ ಕೆಲವರು ಸರಕು ಹಡಗಿನತ್ತ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಯಾವುದೇ ಸಾವು-ನೋವು ಅಥವಾ ನಾಶ-ನಷ್ಟದ ವರದಿಯಾಗಿಲ್ಲ. ಹಡಗು ತನ್ನ ಪ್ರಯಾಣ ಮುಂದುವರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಮನ್ನ ಬಹುತೇಕ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿರುವ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಗಾಝಾ ಯುದ್ಧವನ್ನು ವಿರೋಧಿಸಿ ಕೆಂಪು ಸಮುದ್ರದ ಮೂಲಕ ಸಾಗುವ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ.