ಬಾಂಗ್ಲಾ ಪ್ರಜೆಗಳಿಗೆ ಯುಎಇ ಅಧ್ಯಕ್ಷರ ಕ್ಷಮಾದಾನ
PC : x/@MohamedBinZayed | ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ನಹ್ಯಾನ್
ದುಬೈ : ಪ್ರತಿಭಟನೆ ನಡೆಸಿದ ಬಳಿಕ ಜೈಲುಶಿಕ್ಷೆಗೆ ಗುರಿಯಾಗಿದ್ದ 57 ಬಾಂಗ್ಲಾ ಪ್ರಜೆಗಳಿಗೆ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ನಹ್ಯಾನ್ ಕ್ಷಮಾದಾನ ನೀಡಿರುವುದಾಗಿ ಯುಎಇ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಹಲವಾರು ಎಮಿರೇಟ್ಸ್ಗಳಲ್ಲಿ ಕಳೆದ ತಿಂಗಳು ನಡೆದಿದ್ದ ಪ್ರತಿಭಟನೆ ಮತ್ತು ಗಲಭೆಯಲ್ಲಿ ಪಾಲ್ಗೊಂಡಿದ್ದ ಬಾಂಗ್ಲಾದೇಶದ ಪ್ರಜೆಗಳಿಗೆ ಕ್ಷಮಾದಾನ ನೀಡಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಅಪರಾಧಿಗಳ ಶಿಕ್ಷೆಯನ್ನು ರದ್ದುಗೊಳಿಸಿ ಅವರನ್ನು ಗಡೀಪಾರು ಮಾಡಲು ಸೂಚಿಸಲಾಗಿದೆ. ಯುಎಇ ಅಟಾರ್ನಿ ಜನರಲ್ ಶಿಕ್ಷೆಯ ಅನುಷ್ಟಾನವನ್ನು ನಿಲ್ಲಿಸಲು ಮತ್ತು ಗಡೀಪಾರು ಪ್ರಕ್ರಿಯೆಗಳನ್ನು ಆರಂಭಿಸಲು ಆದೇಶ ಜಾರಿಗೊಳಿಸಿದ್ದಾರೆ. ದೇಶದ ಕಾನೂನುಗಳನ್ನು ಗೌರವಿಸುವಂತೆ ಯುಎಇಯ ಎಲ್ಲಾ ನಿವಾಸಿಗಳಿಗೂ ಕರೆ ನೀಡಿದ್ದಾರೆ ಎಂದು ವರದಿ ಹೇಳಿದೆ.
ಕಳೆದ ತಿಂಗಳು ಶೇಖ್ ಹಸೀನಾ ಪದಚ್ಯುತಿಗೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ 57 ಬಾಂಗ್ಲಾ ಪ್ರಜೆಗಳ ಗುಂಪು ಅಬುಧಾಬಿಯಲ್ಲಿ ಶೇಖ್ ಹಸೀನಾ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಅಬುಧಾಬಿಯ ಫೆಡರಲ್ ನ್ಯಾಯಾಲಯ 3 ಜನರಿಗೆ ಜೀವಾವಧಿ ಶಿಕ್ಷೆ, 53 ಜನರಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ್ದರೆ, ಯುಎಇಗೆ ಅಕ್ರಮವಾಗಿ ಪ್ರವೇಶಿಸಿದ್ದ ಒಬ್ಬ ಬಾಂಗ್ಲಾದೇಶ ಪ್ರಜೆಗೆ 11 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು.