ಬ್ರಿಟನ್ ಸಾರ್ವತ್ರಿಕ ಚುನಾವಣೆ: ಸೋಲೊಪ್ಪಿಕೊಂಡ ಹಾಲಿ ಪ್ರಧಾನಿ ರಿಷಿ ಸುನಕ್
ರಿಷಿ ಸುನಕ್ (Photo: PTI)
ಲಂಡನ್: ಬ್ರಿಟನ್ನ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಾಕ್ ಅವರು ಸೋಲೊಪ್ಪಿಕೊಂಡಿದ್ದಾರೆ. ವಿಪಕ್ಷ ಲೇಬರ್ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ್ದರೆ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
“ಲೇಬರ್ ಪಾರ್ಟಿ ಚುನಾವಣೆ ಗೆದ್ದಿದೆ. ನಾನು ಸರ್ ಕೀರ್ ಸ್ಟಾರ್ಮರ್ ಅವರಿಗೆ ಕರೆ ಮಾಡಿ ವಿಜಯಕ್ಕೆ ಶುಭಾಶಯ ಸಲ್ಲಿಸಿದ್ದೇನೆ. ಇಂದು ಅಧಿಕಾರವನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ಹಸ್ತಾಂತರಿಸಲಾಗುವುದು. ಇದು ನಮ್ಮ ದೇಶದ ಸುಭದ್ರತೆ ಮತ್ತು ಭವಿಷ್ಯದ ಬಗ್ಗೆ ನಮ್ಮೆಲ್ಲರಲ್ಲೂ ವಿಶ್ವಾಸ ಮೂಡಿಸಬೇಕಿದೆ,” ಎಂದು ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ರಿಷಿ ಸುನಕ್ ಹೇಳಿದರು.
“ನನ್ನನ್ನು ಕ್ಷಮಿಸಿ, ಈ ಸೋಲಿಗೆ ನಾನು ಜವಾಬ್ದಾರಿ” ಎಂದು ಸುನಕ್ ಹೇಳಿದರು.
ನಿಧಾನಗತಿಯ ಆರ್ಥಿಕತೆ, ಸಾರ್ವಜನಿಕ ಸೇವೆಗಳಲ್ಲಿನ ಕುಂದುಕೊರತೆ, ಜೀವನಮಟ್ಟದ ಇಳಿಕೆ ಮುಂತಾದ ಸಮಸ್ಯೆಗಳ ನಡುವೆ ಕೀರ್ ಸ್ಟಾರ್ಮರ್ ಅವರ ಲೇಬರ್ ಪಾರ್ಟಿ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.
ಕೀರ್ ಸ್ಟಾರ್ಮರ್ ದೇಶದ ನೂತನ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.