ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ | ಭಾರತಕ್ಕೆ ಫ್ರಾನ್ಸ್, ಬ್ರಿಟನ್ ಬೆಂಬಲ
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ | PC : PTI
ನ್ಯೂಯಾರ್ಕ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಪಡೆಯುವ ಭಾರತದ ಆಶಯವನ್ನು ಬೆಂಬಲಿಸುವುದಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಕೂಡಾ ಭಾರತಕ್ಕೆ ಬೆಂಬಲ ಸೂಚಿಸಿದ್ದರು. ಗುರುವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 79ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸ್ಟಾರ್ಮರ್ `ಭದ್ರತಾ ಮಂಡಳಿಯು ಹೆಚ್ಚು ಪ್ರಾತಿನಿಧಿಕ ಸಂಸ್ಥೆಯಾಗಿ ಬದಲಾಗಬೇಕು. ಮಂಡಳಿಯಲ್ಲಿ ಆಫ್ರಿಕಾದ ಪ್ರತಿನಿಧಿಗಳು, ಭಾರತ, ಬ್ರೆಝಿಲ್, ಜಪಾನ್ ಮತ್ತು ಜರ್ಮನಿಯನ್ನು ಶಾಶ್ವತ ಸದಸ್ಯರ ಸ್ಥಾನದಲ್ಲಿ ನೋಡಲು ನಾವು ಬಯಸುತ್ತೇವೆ ಮತ್ತು ಚುನಾಯಿತ ಸದಸ್ಯರಿಗೆ ಹೆಚ್ಚಿನ ಸ್ಥಾನವನ್ನು ಆಗ್ರಹಿಸುತ್ತೇವೆ' ಎಂದರು.
ಇದಕ್ಕೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಫ್ರಾನ್ಸ್ ಅಧ್ಯಕ್ಷ ಮಾಕ್ರನ್ ` ವಿಶ್ವಸಂಸ್ಥೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡೋಣ. ಅದನ್ನು ಪ್ರಾತಿನಿಧಿಕ ವ್ಯವಸ್ಥೆಯನ್ನಾಗಿ ಬದಲಾಯಿಸೋಣ. ಅದಕ್ಕಾಗಿಯೇ ಭದ್ರತಾ ಮಂಡಳಿಯನ್ನು ವಿಸ್ತರಿಸುವ ಪ್ರಸ್ತಾಪವನ್ನು ಫ್ರಾನ್ಸ್ ಬೆಂಬಲಿಸುತ್ತಿದೆ' ಎಂದರು.