ಉಕ್ರೇನ್ ಜನತೆಯ ಶೌರ್ಯ ಶ್ಲಾಘನೀಯ: ಝೆಲೆನ್ಸ್ಕಿ

ಕೀವ್, ಫೆ.24: ಶತ್ರು ರಾಷ್ಟ್ರದ ನಿರಂತರ ಆಕ್ರಮಣ, ಹಿಂಸಾಚಾರವನ್ನು ಮೂರು ವರ್ಷದಿಂದ ಪ್ರತಿರೋಧಿಸುತ್ತಾ ಬಂದಿರುವ ಉಕ್ರೇನ್ನ ಜನತೆ ನಿಜವಾದ ಹೀರೋಗಳು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶ್ಲಾಘಿಸಿದ್ದಾರೆ.
ಉಕ್ರೇನ್ ಯುದ್ಧದ ಮೂರನೇ ವಾರ್ಷಿಕ ದಿನದಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು `ಮೂರು ವರ್ಷಗಳ ಪ್ರತಿರೋಧ, ಮೂರು ವರ್ಷಗಳ ಉಪಕಾರ ಸ್ಮರಣೆ, ಉಕ್ರೇನಿಯನ್ನರ ಮೂರು ವರ್ಷಗಳ ಶೌರ್ಯ. ದೇಶವನ್ನು ರಕ್ಷಿಸಲು ನೆರವಾದ ಎಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು' ಎಂದು ಹೇಳಿದ್ದಾರೆ.
ಈ ಮಧ್ಯೆ ಉಕ್ರೇನ್ ಜತೆಗೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಯುರೋಪಿಯನ್ ಯೂನಿಯನ್, ಕೆನಡಾದ ನಾಯಕರು ಸೋಮವಾರ ಉಕ್ರೇನ್ ರಾಜಧಾನಿ ತಲುಪಿದ್ದಾರೆ. ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವೋನ್ಡೆರ್ ಲಿಯೆನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಕೋಸ್ಟ, ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಸೇರಿದಂತೆ ಪ್ರಮುಖರು ಸೋಮವಾರ ಬೆಳಿಗ್ಗೆ ರೈಲಿನ ಮೂಲಕ ಉಕ್ರೇನ್ಗೆ ಆಗಮಿಸಿದ್ದಾರೆ.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಜಪಾನ್ ಪ್ರಧಾನಿ ಶಿಗೆರು ಇಷಿಬಾ, ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾಂಚೆಸ್ ಮುಂತಾದ ನಾಯಕರು ವರ್ಚುವಲ್ ವೇದಿಕೆಯ ಮೂಲಕ ಉಕ್ರೇನ್ ಜನರನ್ನುದ್ದೇಶಿಸಿ ಮಾತನಾಡಿ ಬೆಂಬಲ ಸೂಚಿಸಿದರು ಎಂದು ವರದಿಯಾಗಿದೆ.