ಉಕ್ರೇನ್ ಕದನ ವಿರಾಮ: ಅಮೆರಿಕ ರಶ್ಯ ವಿದೇಶಾಂಗ ಸಚಿವರ ಚರ್ಚೆ

ವಾಷಿಂಗ್ಟನ್: ಉಕ್ರೇನ್ ವಿರುದ್ಧದ ರಶ್ಯದ ಯುದ್ಧವನ್ನು ಅಂತ್ಯಗೊಳಿಸುವ ಮಾತುಕತೆಯ ಮುಂದಿನ ಹಂತದ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಮತ್ತು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ದೂರವಾಣಿ ಕರೆಯ ಮೂಲಕ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.
ಉನ್ನತ ರಾಜತಾಂತ್ರಿಕರು ಇತ್ತೀಚೆಗೆ ಸೌದಿ ಅರೆಬಿಯಾದಲ್ಲಿ ನಡೆದ ಸಭೆಯ ಮುಂದಿನ ಹಂತದ ಬಗ್ಗೆ ಚರ್ಚಿಸಿದರು ಹಾಗೂ ಅಮೆರಿಕ ಮತ್ತು ರಶ್ಯ ನಡುವೆ ಸಂವಹನವನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಒಪ್ಪಿಕೊಂಡರು.
ಮಧ್ಯಪ್ರಾಚ್ಯದಲ್ಲಿನ ಮಿಲಿಟರಿ ಚಟುವಟಿಕೆಯ ಬಗ್ಗೆ ರೂಬಿಯೊ ಅವರು ಲಾವ್ರೋವ್‍ಗೆ ಮಾಹಿತಿ ನೀಡಿದರು(ಯೆಮನ್‍ನ ಹೌದಿ ಸಶಸ್ತ್ರಹೋರಾಟಗಾರರ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ) ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ ಹೇಳಿದ್ದಾರೆ. ಇನ್ನಷ್ಟು ರಕ್ತಪಾತವನ್ನು ತಡೆಯಲು ರಾಜಕೀಯ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಲಾವ್ರೋವ್ ಅಭಿಪ್ರಾಯಪಟ್ಟಿದ್ದಾರೆ ಎಂದು ರಶ್ಯದ ಮೂಲಗಳು ಹೇಳಿವೆ.