ರಶ್ಯದ ಇಂಧನ ಡಿಪೋ ಮೇಲೆ ಉಕ್ರೇನ್ ಡ್ರೋನ್ ದಾಳಿ
ಸಾಂದರ್ಭಿಕ ಚಿತ್ರ - AI
ಕೀವ್: ರಶ್ಯದ ಪ್ರಮುಖ ಇಂಧನ ಡಿಪೋವನ್ನು ಗುರಿಯಾಗಿಸಿ ಉಕ್ರೇನ್ ರವಿವಾರ ಡ್ರೋನ್ ದಾಳಿ ನಡೆಸಿದ್ದು ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಈ ವಾರದಲ್ಲಿ ರಶ್ಯದ ಇಂಧನ ಡಿಪೋವನ್ನು ಗುರಿಯಾಗಿಸಿ ರಶ್ಯ ನಡೆಸಿದ ಎರಡನೇ ಡ್ರೋನ್ ದಾಳಿ ಇದಾಗಿದೆ.
ರಶ್ಯದ ಮಿಲಿಟರಿಗೆ ಇಂಧನ ಪೂರೈಕೆಯನ್ನು ಅಡ್ಡಿಪಡಿಸಲು ಈ ದಾಳಿ ನಡೆಸಿರುವುದಾಗಿ ಉಕ್ರೇನ್ನ ಸೇನಾಪಡೆ ಹೇಳಿದೆ. ರಶ್ಯದ ದಕ್ಷಿಣದಲ್ಲಿರುವ ಒರ್ಯಾಲ್ ಪ್ರಾಂತದಲ್ಲಿರುವ ಸ್ಟ್ಯಾನ್ಲಾಯ್ ಇಂಧನ ಡಿಪೋದ ಮೇಲೆ ದಾಳಿ ನಡೆದಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಗವರ್ನರ್ ಆಂಡ್ರೆಯ್ ಕ್ಲಿಚ್ಕೋವ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪ್ರಾಂತದಲ್ಲಿ ಇಂಧನ ಮತ್ತು ತೈಲ ಮೂಲಸೌಕರ್ಯವನ್ನು ಗುರಿಯಾಗಿಸಿದ್ದ ಉಕ್ರೇನ್ನ 20 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ಸ್ಟ್ಯಾನ್ಲಾಯ್ ಇಂಧನ ಡಿಪೋದಲ್ಲಿ ಡ್ರೋನ್ ದಾಳಿಯ ಬಳಿಕ ಸ್ಫೋಟ ಸಂಭವಿಸಿರುವ ಮತ್ತು ಬೆಂಕಿಯ ಜ್ವಾಲೆ ಮೇಲಕ್ಕೇಳುತ್ತಿರುವ ವೀಡಿಯೊವನ್ನು ರಶ್ಯದ `ಅಸ್ಟ್ರಾ' ಸುದ್ದಿಸಂಸ್ಥೆ ಪ್ರಸಾರ ಮಾಡಿದೆ.