ರಶ್ಯದ ಟ್ಯಾಂಕರ್ ಗೆ ಅಪ್ಪಳಿಸಿದ ಉಕ್ರೇನ್ ಡ್ರೋನ್
Photo : PTI
ಮಾಸ್ಕೋ : ಕಪ್ಪು ಸಮುದ್ರ ಮತ್ತು ಅಝೋವ್ ಸಮುದ್ರದ ಸಂಧಿಸ್ಥಳವಾದ ಕೆರ್ಚ್ ಜಲಸಂಧಿಯಲ್ಲಿ ಸಾಗುತ್ತಿದ್ದ ರಶ್ಯದ ಟ್ಯಾಂಕರ್ಗೆ ಉಕ್ರೇನ್ನ ಡ್ರೋನ್ ಅಪ್ಪಳಿಸಿದ್ದು ಟ್ಯಾಂಕರ್ಗೆ ಹಾನಿಯಾಗಿದೆ ಎಂದು ರಶ್ಯದ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ದಾಳಿಯ ಹಿನ್ನೆಲೆಯಲ್ಲಿ ಕ್ರಿಮಿಯಾ ಪ್ರಾಂತವನ್ನು ರಶ್ಯಕ್ಕೆ ಸಂಪರ್ಕಿಸುವ ಪ್ರಮುಖ ಆಯಕಟ್ಟಿನ ಸೇತುವೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಡ್ರೋನ್ ದಾಳಿಯಿಂದ ಟ್ಯಾಂಕರ್ಗೆ ಹಾನಿಯಾಗಿದ್ದು ಟ್ಯಾಂಕರ್ ಅನ್ನು ದಡಕ್ಕೆ ಎಳೆದೊಯ್ಯಲು ಎರಡು ಟಗ್ಬೋಟ್ಗಳನ್ನು ರವಾನಿಸಲಾಗಿದೆ. ಟ್ಯಾಂಕರ್ನಲ್ಲಿ 11 ಮಂದಿಯಿದ್ದರು ಎಂದು ಕಡಲು ಪ್ರದೇಶ ರಕ್ಷಣಾ ಕೇಂದ್ರದ ಅಧಿಕಾರಿಗಳನ್ನು ಉಲ್ಲೇಖಿಸಿ `ತಾಸ್' ಸುದ್ಧಿಸಂಸ್ಥೆ ವರದಿ ಮಾಡಿದೆ.
ಇದು ರಾಸಾಯನಿಕಗಳನ್ನು ಸಾಗಿಸುವ ಎಸ್ಐಜಿ ಟ್ಯಾಂಕರ್ ಎಂದು `ಮಾಸ್ಕೊ ಟೈಮ್ಸ್' ವರದಿ ಮಾಡಿದೆ. ಸಿರಿಯಾದ ಅಧ್ಯಕ್ಷ ಬಾಷರ್ ಅಸಾದ್ರ ಬೆಂಬಲಕ್ಕೆ ರಶ್ಯ ರವಾನಿಸಿರುವ ಸೇನೆಯ ಹೆಲಿಕಾಪ್ಟರ್ ಮತ್ತು ಯುದ್ಧವಿಮಾನಗಳಿಗೆ ಅಗತ್ಯವಿರುವ ಇಂಧನವನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಹಡಗಿನ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು.
ಟ್ಯಾಂಕರ್ ಮೇಲಿನ ದಾಳಿಯಿಂದ ಟ್ಯಾಂಕರ್ನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಟ್ಯಾಂಕರ್ಗೆ ಹಾನಿಯಾಗಿದ್ದು ಅದನ್ನು ದಡಕ್ಕೆ ಎಳೆದು ತರಲಾಗಿದೆ. ಆದರೆ ಟ್ಯಾಂಕರ್ನಿಂದ ರಾಸಾಯನಿಕ ಸೋರಿಕೆಯಾಗಿರುವ ಮಾಹಿತಿಯಿಲ್ಲ ಎಂದು ಝಪೋರಿಝಿಯಾ ಪ್ರದೇಶದಲ್ಲಿ ರಶ್ಯ ನೇಮಿಸಿರುವ ಅಧಿಕಾರಿ ವ್ಲಾದಿಮಿರ್ ರೊಗೊವ್ ಹೇಳಿದ್ದಾರೆ.