ಇಯು ಸದಸ್ಯ ದೇಶಗಳಲ್ಲಿ ಉಕ್ರೇನ್ ಧಾನ್ಯ ಆಮದು ನಿಷೇಧ ರದ್ದು
ಬ್ರಸೆಲ್ಸ್ : ರಫ್ತುಗಳನ್ನು ನಿಯಂತ್ರಿಸುವುದಾಗಿ ಉಕ್ರೇನ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಉಕ್ರೇನಿನ ಆಹಾರಧಾನ್ಯಗಳ ಆಮದಿನ ಮೇಲೆ ವಿಧಿಸಿರುವ ನಿಷೇಧವನ್ನು ಯುರೋಪಿಯನ್ ಯೂನಿಯನ್ 5 ಸದಸ್ಯಗಳು ರದ್ದುಗೊಳಿಸಿವೆ ಎಂದು ವರದಿಯಾಗಿದೆ.
ಉಕ್ರೇನ್ ಮೇಲೆ ರಶ್ಯದ ಆಕ್ರಮಣದ ಬಳಿಕ ಕಪ್ಪುಸಮುದ್ರದ ಮೂಲಕ ಉಕ್ರೇನ್ನ ಆಹಾರಧಾನ್ಯ ರಫ್ತಿಗೆ ರಶ್ಯ ತಡೆಯೊಡ್ಡಿತ್ತು. ಇದರಿಂದ ತನ್ನ ಮಿತ್ರರಾಷ್ಟ್ರ ಯುರೋಪಿಯನ್ ಯೂನಿಯನ್ ಗೆ ಉಕ್ರೇನ್ನ ಆಹಾರ ಧಾನ್ಯ ರಫ್ತು ಹೆಚ್ಚಿತ್ತು. ಆದರೆ ವಿದೇಶದಿಂದ ಆಹಾರಧಾನ್ಯ ಆಮದಿಗೆ ಯುರೋಪಿಯನ್ ಯೂನಿಯನ್ ಸದಸ್ಯ ದೇಶಗಳಾದ ಬಲ್ಗೇರಿಯಾ, ಹಂಗರಿ, ಪೋಲ್ಯಾಂಡ್, ರೊಮಾನಿಯಾ ಮತ್ತು ಸ್ಲೊವಾಕಿಯಾದ ರೈತರು ವಿರೋಧ ಸೂಚಿಸಿದ್ದರು. ಉಕ್ರೇನ್ ನಿಂದ ಆಹಾರಧಾನ್ಯ ಆಮದು ಮಾಡಿಕೊಂಡರೆ ದೇಶೀಯ ಮಾರುಕಟ್ಟೆಯಲ್ಲಿ ದರ ಪೈಪೋಟಿಯಿಂದ ಕೃಷಿ ಉತ್ಪನ್ನಗಳ ದರ ಕುಸಿಯುತ್ತದೆ ಎಂಬುದು ಅವರ ಆತಂಕವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಐದು ದೇಶಗಳು ಉಕ್ರೇನ್ ಆಹಾರ ಆಮದಿಗೆ ನಿಷೇಧ ಹೇರಿದ್ದವು.
ಇದೀಗ ಈ ಐದೂ ದೇಶಗಳು ನಿಷೇಧ ತೆರವಿಗೆ ಸಮ್ಮತಿಸಿವೆ ಎಂದು ಯುರೋಪಿಯನ್ ಯೂನಿಯನ್ ಕಾರ್ಯಕಾರಿ ಸಮಿತಿ ಯುರೋಪಿಯನ್ ಕಮಿಷನ್ ಮಾಹಿತಿ ನೀಡಿದೆ.