ಜಿದ್ದಾದಲ್ಲಿನ ಉಕ್ರೇನ್ ಶಾಂತಿ ಮಾತುಕತೆ ಒಮ್ಮತ ಕ್ರೋಢೀಕರಿಸಲು ನೆರವಾಗಿದೆ: ಚೀನಾ
https://english.alarabiya.net/News/world/2023/08/07/China-s-FM-says-Saudi-hosted-Ukraine-talks-consolidated-international-consensus-
ಬೀಜಿಂಗ್: ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ರೂಪಿಸುವ ಉದ್ದೇಶದಿಂದ ಕಳೆದ ವಾರಾಂತ್ಯ ಸೌದಿ ಅರೆಬಿಯಾದ ಜಿದ್ದಾದಲ್ಲಿ ನಡೆದ ಅಂತರಾಷ್ಟ್ರೀಯ ಮಾತುಕತೆಯು ಒಮ್ಮತವನ್ನು ಕ್ರೋಢೀಕರಿಸಲು ನೆರವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ.
ಚೀನಾ, ಭಾರತ, ಅಮೆರಿಕ, ಯುರೋಪಿಯನ್ ಯೂನಿಯನ್ ಸೇರಿದಂತೆ 40ಕ್ಕೂ ಅಧಿಕ ದೇಶಗಳು ಜೆದ್ದಾದಲ್ಲಿ ನಡೆದ ಮಾತುಕತೆಯಲ್ಲಿ ಪಾಲ್ಗೊಂಡಿದ್ದವು. ಈ ಸಭೆಗೆ ರಶ್ಯಕ್ಕೆ ಆಹ್ವಾನ ಇರಲಿಲ್ಲ. ಸಭೆಯಲ್ಲಿ ಚೀನಾದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಯುರೇಷಿಯನ್ ವ್ಯವಹಾರಗಳ ವಿಶೇಷ ಪ್ರತಿನಿಧಿ ಲಿ ಹುಯಿ `ಉಕ್ರೇನ್ ಬಿಕ್ಕಟ್ಟಿನ ಕುರಿತು ಎಲ್ಲಾ ಪ್ರತಿನಿಧಿಗಳೊಂದಿಗೆ ವ್ಯಾಪಕ ಸಂವಹನ ಮತ್ತು ಸಂಪರ್ಕ ಸಾಧಿಸಿದರು ಮತ್ತು ಈ ಮಾತುಕತೆ ಅಂತರಾಷ್ಟ್ರೀಯ ಒಮ್ಮತವನ್ನು ಮತ್ತಷ್ಟು ಕ್ರೋಢೀಕರಿಸಿದೆ. ಎಲ್ಲಾ ದೇಶಗಳೂ ಶಾಂತಿ ಮಾತುಕತೆಯನ್ನು ಸುಗಮಗೊಳಿಸುವಲ್ಲಿ ಚೀನಾದ ಸಕಾರಾತ್ಮಕ ಪಾತ್ರವನ್ನು ಸಂಪೂರ್ಣವಾಗಿ ಬೆಂಬಲಿಸಿವೆ. ಚೀನಾವು ತನ್ನ 12 ಅಂಶಗಳ ಶಾಂತಿ ಪ್ರಸ್ತಾವನೆಯ ಆಧಾರದದಲ್ಲಿ ಮಾತುಕತೆಯನ್ನು ದೃಢಪಡಿಸುವ ಮತ್ತು ಪರಸ್ಪರ ವಿಶ್ವಾಸವನ್ನು ವೃದ್ಧಿಸುವ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ರಶ್ಯವನ್ನು ಖಂಡಿಸುವುದನ್ನು ನಿರಾಕರಿಸುತ್ತಾ ಬಂದಿರುವ ಚೀನಾ, ಜಿದ್ದಾ ಮಾತುಕತೆಯಲ್ಲಿ ಪಾಲ್ಗೊಂಡಿರುವುದು ಚೀನಾದ ಅನುಸಂಧಾನದಲ್ಲಿ ಸಂಭವನೀಯ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.