ಉಕ್ರೇನ್- ರಷ್ಯಾ ಯುದ್ಧ ಕೊನೆಗೊಳಿಸುವುದಾಗಿ ಹೇಳಿದ ಟ್ರಂಪ್: ʼಪುಟಿನ್ ನಿಮ್ಮನ್ನು ತಿಂದು ಹಾಕುತ್ತಾರೆʼ ಎಂದ ಕಮಲಾ ಹ್ಯಾರಿಸ್
ಡೊನಾಲ್ಡ್ ಟ್ರಂಪ್ (PTI) / ಕಮಲಾ ಹ್ಯಾರಿಸ್ (X/@KamalaHarris)
ಅಮೆರಿಕ: ಉಕ್ರೇನ್- ರಷ್ಯಾ ಯುದ್ಧ ಕೊನೆಗೊಳಿಸುವುದಾಗಿ ಹೇಳಿದ ಡೊನಾಲ್ಡ್ ಟ್ರಂಪ್ ಗೆ ʼಪುಟಿನ್ ನಿಮ್ಮನ್ನು ತಿಂದು ಹಾಕುತ್ತಾರೆʼ ಎಂದು ಕಮಲಾ ಹ್ಯಾರಿಸ್ ಕಾಲೆಳೆದಿದ್ದಾರೆ.
ಎಬಿಸಿ ನ್ಯೂಸ್ ಆಯೋಜಿಸಿದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ನಡೆದ ಮೊದಲ ಮುಖಾಮುಖಿ ಚರ್ಚೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಭಾಗಿಯಾಗಿದ್ದರು. ಗರ್ಭಪಾತ, ಯುದ್ಧ, ಆರ್ಥಿಕತೆ, ವಸತಿ ಬಿಕ್ಕಟ್ಟು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ವೇಳೆ ಚರ್ಚೆಯಾಗಿದ್ದು, ಪರಸ್ಪರ ವಾಕ್ಸಮರವೇ ನಡೆದಿದೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನಕ್ಕೆ ಎಂಟು ವಾರಗಳ ಮೊದಲು ಈ ಮಹತ್ವದ ಚರ್ಚೆ ನಡೆದಿದೆ. ಚರ್ಚೆಯ ವೇಳೆ ಮಾತನಾಡಿದ ಡೊನಾಲ್ಡ್ ಟ್ರಂಪ್, ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಜನರ ಜೀವಗಳನ್ನು ಉಳಿಸುವುದು ನನ್ನ ಉದ್ದೇಶವಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿ ಅಧಿಕಾರ ವಹಿಸಿಕೊಳ್ಳುವ ಮೊದಲು ಯುದ್ಧವನ್ನು ಪರಿಹರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ರಷ್ಯಾ ವಿರುದ್ಧ ಉಕ್ರೇನ್ ಯುದ್ಧವನ್ನು ಗೆಲ್ಲುವುದು ಅಮೆರಿಕದ ಹಿತದೃಷ್ಟಿಯಲ್ಲಿದೆಯೇ ಎಂದು ಕೇಳಿದಾಗ, ಯುದ್ಧವನ್ನು ನಿಲ್ಲಿಸುವುದು ದೇಶದ ಹಿತಾಶಕ್ತಿಯಾಗಿದೆ. ನಾನು ಏನು ಮಾಡುತ್ತೇನೆ ಎಂದರೆ ಎರಡೂ ದೇಶಗಳ ಅಧ್ಯಕ್ಷರ ಜೊತೆ ಮೊದಲು ಪ್ರತ್ಯೇಕವಾಗಿ ಮಾತನಾಡುತ್ತೇನೆ, ಬಳಿಕ ಇಬ್ಬರನ್ನು ಒಟ್ಟಿಗೆ ಸೇರಿಸಿ ಮಾತುಕತೆ ನಡೆಸುತ್ತೇನೆ. ನಾನು ನಾನು ಅಧ್ಯಕ್ಷನಾಗಿ ಇರುತ್ತಿದ್ದರೆ ಈ ಸಂಘರ್ಷ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಮಾತನ್ನು ಕೇಳಿದ ನಂತರ ಪ್ರತಿಕ್ರಿಯಿಸಿದ ಕಮಲಾ ಹ್ಯಾರಿಸ್, ಟ್ರಂಪ್ ಅಧಿಕಾರದಲ್ಲಿದ್ದಿದ್ದರೆ ಪುಟಿನ್ ಕೀವ್ ಅನ್ನು ವಶಪಡಿಸಿಕೊಳ್ಳುತ್ತಿದ್ದರು. ಅವರು ನಿಮ್ಮನ್ನು ತಿಂದು ಹಾಕುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಇಸ್ರೇಲ್-ಹಮಾಸ್ ಯುದ್ಧ ವಿಚಾರಕ್ಕೆ ಸಂಬಂಧಿಸಿ ಕಮಲಾ ಹ್ಯಾರಿಸ್ ಎರಡು ರಾಜ್ಯಗಳು ಪರಿಹಾರ ಕಂಡು ಕೊಳ್ಳುವ ಬಗ್ಗೆ ಹೇಳಿದ್ದಾರೆ. ನಾನು ಅಮೆರಿಕದ ಅಧ್ಯಕ್ಷನಾಗಿ ಇರುತ್ತಿದ್ದರೆ ಈ ರೀತಿ ಸಮಸ್ಯೆ ಆಗುತ್ತಿರಲಿಲ್ಲ. ಹ್ಯಾರಿಸ್ ಇಸ್ರೇಲ್ ಮತ್ತು ಆ ಪ್ರದೇಶದಲ್ಲಿನ ಅರಬ್ ಜನರನ್ನು ದ್ವೇಷಿಸುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಹೇಳಿಕೆಗಳು ನಿಜವಲ್ಲ ಎಂದು ಕಮಲಾ ಹ್ಯಾರಿಸ್ ಪ್ರತಿಕ್ರಿಯಿಸಿದ್ದು, ಇಸ್ರೇಲ್ಗೆ ತನ್ನ ಬೆಂಬಲವನ್ನು ಒತ್ತಿ ಹೇಳಿದ್ದಾರೆ.