ರಶ್ಯದ 11 ಡ್ರೋನ್ ಗಳನ್ನು ಹೊಡೆದುರುಳಿಸಿದ ಉಕ್ರೇನ್
ಸಾಂದರ್ಭಿಕ ಚಿತ್ರ | Photo: NDTV
ಕೀವ್ : ಕಪ್ಪುಸಮುದ್ರ ಕರಾವಳಿಯ ದಕ್ಷಿಣ ಪ್ರಾಂತದಲ್ಲಿ ರಶ್ಯನ್ ಪಡೆಗಳು ಬುಧವಾರ ರಾತ್ರಿ 14 ಡ್ರೋನ್ ಗಳನ್ನು ಉಡಾಯಿಸಿದ್ದು, ಅವುಗಳಲ್ಲಿ 11 ಡ್ರೋನ್ ಗಳನ್ನು ತಾನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಗುರುವಾರ ತಿಳಿಸಿದೆ. ರಶ್ಯನ್ ಪಡೆಗಳು ರಾತ್ರೋರಾತ್ರಿ ನಗರಗಳು ಹಾಗೂ ಪ್ರಮುಖ ಮೂಲಸೌಕರ್ಯಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿದ್ದು ಅದನ್ನು ಹಿಮ್ಮೆಟ್ಟಿಸಲು ತನ್ನ ವಾಯುರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುವಂತೆ ಉಕ್ರೇನ್ ತನ್ನ ಪಾಶ್ಚಾತ್ಯ ಮಿತ್ರರಾಷ್ಟ್ರಗಳನ್ನು ಆಗ್ರಹಿಸಿವೆ.
ಒಡೆಶಾ ಹಾಗೂ ಮಿಕಾಲೈವ್ ಪ್ರಾಂತಗಳಲ್ಲಿ ರಶ್ಯವು ಉಡಾವಣೆಗೊಳಿಸಿದ ಇರಾನ್ ನಿರ್ಮಿತ 11 ಶಾಹೀದ್ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಮಧ್ಯೆ ಉಕ್ರೇನಿನ ಒಡೆಶಾ ಬಂದರು ಸಮೀಪ ರಶ್ಯ ನಡೆಸಿದ ರಾಕೆಟ್ ದಾಳಿಯಲ್ಲಿ ಹೊಟೇಲೊಂದಕ್ಕೆ ಬೆಂಕಿ ಹತ್ತಿಕೊಂಡಿದೆ. ವಸತಿ ಕಟ್ಟಗಳು ಹಾಗೂ ಗೋದಾಮಿಗೂ ದಾಳಿಯಿಂದ ಹಾನಿಯಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಬುಧವಾರ ಉಕ್ರೇನ್ ಗಡಿ ಪ್ರಾಂತವಾದ ಪೂರ್ವ ಖಾರ್ಕಿವ್ನಲ್ಲಿ ರಶ್ಯದ ಕ್ಷಿಪಣಿ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಹಲವಾರು ಮನೆಗಳು ಬೆಂಕಿಗಾಹುತಿಯಾಗಿವೆ.