ಅಮೆರಿಕಗೆ ಸೆಡ್ಡು: ಬ್ರಿಟನ್ ನಿಂದ 2.26 ಶತಕೋಟಿ ಪೌಂಡ್ ಸಾಲ ಪಡೆಯಲು ಉಕ್ರೇನ್ ಒಪ್ಪಂದ

PC | AP
ಲಂಡನ್: ಅಮೆರಿಕ ಜತೆಗಿನ ದ್ವಿಪಕ್ಷೀಯ ಸಂಬಂಧ ಹಳಸಿದ ಬೆನ್ನಲ್ಲೇ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬ್ರಿಟನ್ ನಿಂದ 226 ಕೋಟಿ ಪೌಂಡ್ ಸಾಲ ಪಡೆಯುವ ಐತಿಹಾಸಿಕ ಒಪ್ಪಂದಕ್ಕೆ ಉಕ್ರೇನ್ ಸಹಿ ಮಾಡಿದೆ.
ಶನಿವಾರ ಈ ಒಪ್ಪಂದವನ್ನು ಬಹಿರಂಗಪಡಿಸಲಾಗಿದ್ದು, ಕ್ರೋಢೀಕೃತವಲ್ಲದ ರಷ್ಯಾದ ಸಾರ್ವಭೌಮತ್ವ ಆಸ್ತಿಗಳಿಂದ ಬಂದ ಲಾಭದಿಂದ ಸಾಲ ಮರುಪಾವತಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಎಫ್ಪಿ ವರದಿ ಮಾಡಿದೆ. ವರ್ಚುವಲ್ ಸಮಾರಂಭದಲ್ಲಿ ಉಭಯ ದೇಶಗಳ ಹಣಕಾಸು ಸಚಿವರಾದ ರಚೆಲ್ ರೀವ್ಸ್ ಮತ್ತು ಸೆರ್ಗೀ ಮರ್ಚೆಂಕೊ ಅವರು ಈ ಸಾಲ ಒಪ್ಪಂದವನ್ನು ಅಂತಿಮಪಡಿಸಿದ್ದಾರೆ. ಈ ಬಗ್ಗೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಜತೆ ಲಂಡನ್ನಲ್ಲಿ ಮಾತುಕತೆ ನಡೆಸಿದರು.
ಡೌನಿಂಗ್ ಸ್ಟ್ರೀಟ್ನಲ್ಲಿ ಝೆಲೆನ್ಸ್ಕಿಯರವನ್ನು ಸ್ಟಾರ್ಮರ್ ಆತ್ಮೀಯವಾಗಿ ಸ್ವಾಗತಿಸಿದರು. ಈ ಒಪ್ಪಂದವನ್ನು ನಿಜವಾದ ನ್ಯಾಯ ಎಂದು ಬಣ್ಣಿಸಿದ ಅವರು, ಯುದ್ಧವನ್ನು ಆರಂಭಿಸಿದವರು ಇದನ್ನು ಮರುಪಾವತಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಾಲವನ್ನು ಪ್ರಾಥಮಿಕವಾಗಿ ಉಕ್ರೇನ್ನಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಲಾಗುತ್ತದೆ. ದೇಶೀಯ ಶಸ್ತ್ರಾಸ್ತ್ರ ಉದ್ಯಮವನ್ನು ಬಲಪಡಿಸುವ ಉಕ್ರೇನ್ನ ವಿಸ್ತೃತ ಪ್ರಯತ್ನಗಳಿಗೆ ಇದು ಪೂರಕವಾಗಲಿದ್ದು, ರಷ್ಯನ್ ಪಡೆಗಳ ವಿರುದ್ಧದ ಸೇನಾ ಪ್ರತಿರೋಧ ಶಕ್ತಿಯನ್ನು ಸುಸ್ಥಿರಗೊಳಿಸಲೂ ನೆರವಾಗಲಿದೆ.
ಉಕ್ರೇನ್ಗೆ ಅಚಲ ಬೆಂಬಲ ಮುಂದುವರಿಸುವ ಭರವಸೆ ನೀಡಿದ ಸ್ಟಾರ್ಮೆರ್, ಇಡೀ ಖಂಡದ ಭದ್ರತೆಯ ದೃಷ್ಟಿಯಿಂದ ಯೂರೋಪಿಯನ್ ಒಕ್ಕೂಟ ಒಮ್ಮತದಿಂದ ಉಕ್ರೇನ್ಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು. ಅಮೆರಿಕದ ಜತೆ ಚರ್ಚೆ ನಡೆಸುವ ಮಧ್ಯೆಯೇ ನಮ್ಮ ಮಿತ್ರದೇಶಗಳ ಪಾಲುದಾರಿಕೆಯಲ್ಲಿ ಭದ್ರತಾ ಖಾತರಿಯ ಯೂರೋಪಿಯನ್ ಅಂಶಕ್ಕಾಗಿ ಸರ್ವಸನ್ನದ್ಧರಾಗುವ ಪ್ರಯತ್ನವನ್ನು ತೀವ್ರಗೊಳಿಸಬೇಕು ಎಂದು ಸಲಹೆ ಮಾಡಿದರು.