ಉಕ್ರೇನ್ ಪಡೆಗಳಿಗೆ ಶಸ್ತ್ರಾಸ್ತ್ರ ಕೊರತೆ: ವರದಿ
ಫೈಲ್ ಫೋಟೊ | PTI
ಕೀವ್: ವಿದೇಶದ ನೆರವು ಕಡಿಮೆಯಾಗುತ್ತಿದ್ದಂತೆಯೇ ಮುಂಚೂಣಿ ಉಕ್ರೇನಿಯನ್ ಪಡೆಗಳಿಗೆ ಫಿರಂಗಿ ಗುಂಡುಗಳ ತೀವ್ರ ಕೊರತೆ ಎದುರಾಗಿದ್ದು ಹಲವು ಮಿಲಿಟರಿ ಕಾರ್ಯಾಚರಣೆಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
`ಮದ್ದುಗುಂಡುಗಳ ಕೊರತೆಯಿದೆ. ವಿಶೇಷವಾಗಿ ಸೋವಿಯತ್ ಯುಗದ ಬಳಿಕದ ಫಿರಂಗಿ ಗುಂಡುಗಳು ಖಾಲಿಯಾಗಿವೆ. ಈ ಸಮಸ್ಯೆ ಮುಂಚೂಣಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಕೆಲವು ಕಾರ್ಯಾಚರಣೆ ಹಿಂದಕ್ಕೆ ಪಡೆಯಲಾಗಿದೆ' ಎಂದು ಉಕ್ರೇನ್ ಸೇನೆಯ ಹಿರಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಅಲೆಕ್ಸಾಂಡರ್ ತರ್ನಾವ್ಸ್ಕಿ ಹೇಳಿರುವುದಾಗಿ ವರದಿಯಾಗಿದೆ. ಉಕ್ರೇನ್ ಗೆ 60 ಶತಕೋಟಿ ಡಾಲರ್ ನೆರವಿನ ಪ್ಯಾಕೇಜ್ ಗೆ ಅಮೆರಿಕ ಸಂಸತ್ತಿನ ರಿಪಬ್ಲಿಕನ್ ಸಂಸದರು ತಡೆನೀಡಿದ್ದರೆ ಯುರೋಪಿಯನ್ ಯೂನಿಯನ್ನ 54.5 ಶತಕೋಟಿ ಡಾಲರ್ ನೆರವನ್ನು ಹಂಗರಿ ತಡೆಹಿಡಿದಿದೆ. `ಫಿರಂಗಿ ಗುಂಡುಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ ಮತ್ತು ವಿದೇಶಿ ಮಿಲಿಟರಿ ನೆರವಿನ ಕುಸಿತವು ಯುದ್ಧಭೂಮಿಯ ಮೇಲೆ ಪರಿಣಾಮ ಬೀರಿದೆ. ಈಗಿನ ಅಗತ್ಯವನ್ನು ಗಮನಿಸಿದರೆ ನಮ್ಮಲ್ಲಿರುವ ದಾಸ್ತಾನು ಈಗ ಸಾಕಷ್ಟಿಲ್ಲ. ಆದ್ದರಿಂದ ಇರುವುದನ್ನೇ ಸಮಾನವಾಗಿ ಮರುಹಂಚಿಕೆ ಮಾಡಬೇಕಿದೆ. ನಮ್ಮ ಮಿಲಿಟರಿ ಕಾರ್ಯಾಚರಣೆಯ ವ್ಯಾಪ್ತಿಯನ್ನು ಕಡಿಮೆಗೊಳಿಸುವ ಅನಿವಾರ್ಯತೆಯಿದೆ' ಎಂದು ತರ್ನಾವ್ಸ್ಕಿ ಹೇಳಿದ್ದಾರೆ.
ರಶ್ಯದ ಜತೆ ಸುಮಾರು 1000 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿರುವ ಉಕ್ರೇನ್ ಗೆ, ಸುಮಾರು 2 ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಮೊದಲ ಬಾರಿಗೆ ವಿದೇಶಿ ಮಿಲಿಟರಿ ನೆರವಿನ ಕಡಿತದಿಂದ ಶಸ್ತ್ರಾಸ್ತ್ರ ಕೊರತೆಯ ಸಮಸ್ಯೆ ಎದುರಾಗಿದೆ.