ಬ್ರಿಟನ್ಗೆ ಉಕ್ರೇನ್ ರಾಯಭಾರಿ ವದಿಮ್ ಪ್ರಿಸ್ಟಯಿಕೊ ವಜಾ
Photo : Vadym Prystaiko \ Twitter
ಕೀವ್ : ಬ್ರಿಟನ್ಗೆ ಉಕ್ರೇನ್ ರಾಯಭಾರಿಯಾಗಿರುವ ವದಿಮ್ ಪ್ರಿಸ್ಟಯಿಕೊರನ್ನು ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ವಜಾಗೊಳಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.
ಝೆಲೆನ್ಸ್ಕಿಯನ್ನು ಸಾರ್ವಜನಿಕವಾಗಿ ಟೀಕಿಸಿದ ಕೆಲವೇ ದಿನಗಳಲ್ಲಿ ಪ್ರಿಸ್ಟಯಿಯೊ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಷನ್(ನೌಕಾಯಾನವನ್ನು ನಿಯಂತ್ರಿಸುವ ವಿಶ್ವಸಂಸ್ಥೆಯ ವಿಶೇಷ ಸಂಘಟನೆ)ನಲ್ಲಿ ಉಕ್ರೇನ್ನ ಪ್ರತಿನಿಧಿ ಹುದ್ದೆಯಿಂದಲೂ ಪ್ರಿಸ್ಟಯಿಕೊ ವಜಾಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಆದೇಶ ತಿಳಿಸಿದ್ದು ವಜಾಗೊಳಿಸಲು ಕಾರಣವೇನೆಂದು ಮಾಹಿತಿ ನೀಡಿಲ್ಲ.
ರಶ್ಯ ವಿರುದ್ಧದ ಹೋರಾಟದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸುತ್ತಿರುವುದಕ್ಕೆ ಉಕ್ರೇನ್ ತನ್ನ ಮಿತ್ರದೇಶಗಳಿಗೆ ಇನ್ನಷ್ಟು ಕೃತಜ್ಞವಾಗಿರಬೇಕು ಎಂದು ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಬೆನ್ವ್ಯಾಲೇಸ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಉಕ್ರೇನ್ ಆಪ್ತಮಿತ್ರ ಬ್ರಿಟನ್ಗೆ ಯಾವತ್ತೂ ಕೃತಜ್ಞವಾಗಿರುತ್ತದೆ ಎಂದಿದ್ದರು. ಜತೆಗೆ `ಇನ್ನಷ್ಟು ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬಹುದು ಅಥವಾ ಬೆಳಿಗ್ಗೆ ಎದ್ದು ಸಚಿವರಿಗೆ ನಮ್ಮ ಕೃತಜ್ಞತೆಯನ್ನು ಹೇಗೆ ಸಲ್ಲಿಸಬಹುದು' ಎಂಬುದನ್ನು ವ್ಯಾಲೇಸ್ ಸೂಚಿಸಬಹುದು ಎಂದು ಹೇಳಿರುವುದಾಗಿ ಬ್ರಿಟನ್ ಮಾಧ್ಯಮಗಳು ವರದಿ ಮಾಡಿದ್ದವು.
ಝೆಲೆನ್ಸ್ಕಿ ವ್ಯಂಗ್ಯವಾಡುತ್ತಿದ್ದಾರೆಯೇ ಎಂದು ಕಳೆದ ವಾರ ಮಾಧ್ಯಮಗಳು ಪ್ರಶ್ನಿಸಿದ್ದವು. ಇದಕ್ಕೆ ಉತ್ತರಿಸಿದ್ದ ಪ್ರಿಸ್ಟಯಿಕೊ ` ಈ ಹೇಳಿಕೆಯಲ್ಲಿ ಸ್ವಲ್ಪ ವ್ಯಂಗ್ಯವಿತ್ತು. ಇದು ಉತ್ತಮ ಹೇಳಿಕೆ ಎಂದು ಭಾವಿಸಲಾಗದು. ನಾವು ಜತೆಗೂಡಿ ಕೆಲಸ ಮಾಡುತ್ತಿರುವುದು ರಶ್ಯನ್ನರಿಗೆ ಗೊತ್ತಾಗಬೇಕಿದೆ' ಎಂದಿದ್ದರು.