ರಶ್ಯದ ವಿರುದ್ಧ ಉಕ್ರೇನ್ ನ ಪ್ರಕರಣ ಮುಂದುವರಿಸಬಹುದು: ಐಸಿಜೆ
Photo: NDTV
ಹೇಗ್ : ರಶ್ಯವು 2022ರಲ್ಲಿ ನಡೆಸಿದ ಕ್ರೂರ ಆಕ್ರಮಣದ ವಿರುದ್ಧ ಉಕ್ರೇನ್ ದಾಖಲಿಸಿರುವ ಪ್ರಕರಣದ ಬಹುತೇಕ ಅಂಶಗಳು ತನ್ನ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಂದುವರಿಸಬಹುದು ಎಂದು ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಅಂತರಾಷ್ಟ್ರೀಯ ಕೋರ್ಟ್(ಐಸಿಜೆ) ಹೇಳಿದೆ.
ಪೂರ್ವ ಉಕ್ರೇನ್ನಲ್ಲಿ ರಶ್ಯ ಪರವಿರುವ ಜನರನ್ನು ಉಕ್ರೇನ್ ಆಡಳಿತ ಬೆದರಿಸುವ, ಅವರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವ ಜತೆಗೆ ಸಾಮೂಹಿಕ ಹತ್ಯೆ ನಡೆಸುತ್ತಿದ್ದ ಕಾರಣ 2022ರ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ನಡೆಸಲು ತನ್ನ ಸೇನೆಗೆ ಆದೇಶಿಸಲಾಗಿದೆ ಎಂದು ರಶ್ಯ ಆಡಳಿತ ಹೇಳುತ್ತಿದೆ. ಆದರೆ ಈ ಹೇಳಿಕೆಯನ್ನು ನಿರಾಕರಿಸಿದ್ದ ಉಕ್ರೇನ್, ಸಾಮೂಹಿಕ ಹತ್ಯೆಯ ಆರೋಪದ ನೆಪದಲ್ಲಿ ರಶ್ಯ ಸೇನೆ ನಡೆಸಿರುವ ಆಕ್ರಮಣ 1948ರ ವಿಶ್ವಸಂಸ್ಥೆ ನಿರ್ಣಯವನ್ನು ಉಲ್ಲಂಘಿಸಿದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. 2022ರ ಮಾರ್ಚ್ನಲ್ಲಿ ನೀಡಿದ್ದ ಪ್ರಾಥಮಿಕ ತೀರ್ಪಿನಲ್ಲಿ ಐಸಿಜೆ ಉಕ್ರೇನ್ ಪರ ತೀರ್ಪು ಪ್ರಕಟಿಸಿ, ಆಕ್ರಮಣವನ್ನು ತಕ್ಷಣ ಸ್ಥಗಿತಗೊಳಿಸಲು ರಶ್ಯಕ್ಕೆ ಸೂಚಿಸಿತ್ತು.
ಆದರೆ ಈ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಶ್ಯ, ಎರಡು ದೇಶಗಳ ನಡುವಿನ ವಿವಾದವು ಐಸಿಜೆಯ ವ್ಯಾಪ್ತಿಗೆ ಬರುತ್ತದೆ, ಆದರೆ ಈ ಪ್ರಕರಣದಲ್ಲಿ ವಿಚಾರಣೆ ನಡೆಸಲು ಐಸಿಜೆಗೆ ಕಾನೂನು ಅಧಿಕಾರವಿಲ್ಲ ಎಂದು ಹೇಳಿತ್ತು. ಇದೀಗ ಪ್ರಕರಣ ಮುಂದುವರಿಸಬಹುದು ಎಂದು ಐಸಿಜೆ ನೀಡಿರುವ ತೀರ್ಪು ಉಕ್ರೇನ್ಗೆ ಸಂದ ಗೆಲುವಾಗಿದೆ ಮತ್ತು ಈ ಪ್ರಕರಣವನ್ನು ಮುಂದುವರಿಸಲಾಗುವುದು ಎಂದು ಉಕ್ರೇನ್ನ ಕಾನೂನು ಸಲಹೆಗಾರ ಆ್ಯಂಟನ್ ಕೊರಿನೆವಿಚ್ ಪ್ರತಿಕ್ರಿಯಿಸಿದ್ದಾರೆ.