ಟ್ರಂಪ್ ಒತ್ತಡಕ್ಕೆ ಮಣಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ | ಅಮೆರಿಕಕ್ಕೆ ಖನಿಜ ಸಹಭಾಗಿತ್ವ ನೀಡುವ ಪ್ರಸ್ತಾಪ

ವೊಲೊದಿಮಿರ್ ಝೆಲೆನ್ಸ್ಕಿ | PC : PTI
ಕೀವ್: ಉಕ್ರೇನ್ಗೆ ಅಮೆರಿಕವು ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಮುಂದುವರಿಸಿದರೆ ದೇಶದಲ್ಲಿರುವ ಖನಿಜ ಸಂಪತ್ತಿನ ಸಹಭಾಗಿತ್ವವನ್ನು ಅಮೆರಿಕಕ್ಕೆ ನೀಡುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ.
ರಶ್ಯ-ಉಕ್ರೇನ್ ಯುದ್ಧವನ್ನು ಕ್ಷಿಪ್ರವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಮಾತುಕತೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನದ ಹಿಂದೆ ಪುನರುಚ್ಚರಿಸಿದ್ದರು. ಜತೆಗೆ, ಉಕ್ರೇನ್ಗೆ ಆರ್ಥಿಕ ಮತ್ತು ಮಿಲಿಟರಿ ನೆರವು ಮುಂದುವರಿಸಬೇಕಿದ್ದರೆ ಆ ದೇಶದಲ್ಲಿರುವ ಹೇರಳ ಖನಿಜ ಸಂಪತ್ತಿನ ಸಹಭಾಗಿತ್ವವನ್ನು ಅಮೆರಿಕಕ್ಕೆ ನೀಡಬೇಕು ಮತ್ತು ಖನಿಜಗಳನ್ನು ಅಮೆರಿಕಕ್ಕೆ ಪೂರೈಸಬೇಕು ಎಂದು ಒತ್ತಾಯಿಸಿದ್ದರು.
ಬ್ಯಾಟರಿಗಳು, ಸ್ಮಾರ್ಟ್ಫೋನ್ಗಳು, ವಿದ್ಯುತ್ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಅಗತ್ಯವಿರುವ ಪ್ರಾಕೃತಿಕ ಖನಿಜ ಸಂಪನ್ಮೂಲಗಳು ಉಕ್ರೇನ್ ನಲ್ಲಿ ಹೇರಳವಾಗಿವೆ. ಹಣಕಾಸು ಮತ್ತು ಭದ್ರತಾ ಆಶ್ವಾಸನೆಗಳಿಗೆ ಪ್ರತಿಯಾಗಿ ಉಕ್ರೇನ್ ನ ಅಪರೂಪದ ಖನಿಜ ನಿಕ್ಷೇಪಗಳಿಗೆ ಪ್ರವೇಶವನ್ನು ನೀಡುವುದಾಗಿ ಉಕ್ರೇನ್ ಅಧ್ಯಕ್ಷರು ಅಮೆರಿಕದ ಅಧ್ಯಕ್ಷರಿಗೆ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನ್ ನ ಖನಿಜ ಸಂಪನ್ಮೂಲಗಳ ಮಾಹಿತಿ ನೀಡುವ ನಕ್ಷೆಯನ್ನು ಪ್ರದರ್ಶಿಸಿದರು. `ಈ ಖನಿಜ ಸಂಪನ್ಮೂಲಗಳು ಆಧುನಿಕ ಕೈಗಾರಿಕೆಗಳಿಗೆ ನಿರ್ಣಾಯಕವಾಗಿವೆ. ಒಪ್ಪಂದದ ಬಗ್ಗೆ ಮಾತನಾಡುವುದಾದರೆ, ನಾವು ಅದಕ್ಕೆ ಸಿದ್ಧವಿದ್ದೇವೆ. ಆದರೆ ಭದ್ರತೆಯ ಗ್ಯಾರಂಟಿ ಯಾವುದೇ ಒಪ್ಪಂದದ ಭಾಗವಾಗಿರಬೇಕು' ಎಂದು ಹೇಳಿರುವುದಾಗಿ `ರಾಯ್ಟರ್ಸ್' ವರದಿ ಮಾಡಿದೆ.
ಉಕ್ರೇನ್ ಯುರೋಪ್ನ ಅತೀ ದೊಡ್ಡ ಟೈಟಾನಿಯಂ ಖನಿಜವನ್ನು ಹೊಂದಿದ್ದು ಇದು ವಾಯುಯಾನ ಮತ್ತು ಬಾಹ್ಯಾಕಾಶ ಉದ್ಯಮಕ್ಕೆ ಅಗತ್ಯವಾಗಿದೆ. ಮತ್ತು ಯುರೇನಿಯಂ ಅನ್ನು ಪರಮಾಣು ಶಕ್ತಿ ಮತ್ತು ಶಸ್ತ್ರಾಸ್ತ್ರಗಳಿಗೆ ಬಳಕೆಯಾಗುತ್ತದೆ. ಆದರೆ ನಾವು ಇವುಗಳನ್ನು ಸುಮ್ಮನೆ ಬಿಟ್ಟುಕೊಡುವುದಿಲ್ಲ. ಪರಸ್ಪರ ಪ್ರಯೋಜನಕಾರಿಯಾದ ಯೋಜನೆಯನ್ನು ಪ್ರಸ್ತಾಪಿಸಿದ್ದೇವೆ. ನಮ್ಮ ಸಂಕಷ್ಟ ಕಾಲದಲ್ಲಿ ನಮಗೆ ಅಮೆರಿಕನ್ನರು ಅತೀ ಹೆಚ್ಚಿನ ನೆರವು ನೀಡಿದ್ದಾರೆ. ಆದ್ದರಿಂದ ನಮ್ಮಿಂದ ಅತೀ ಹೆಚ್ಚು ಪ್ರಯೋಜನವನ್ನು ಅಮೆರಿಕನ್ನರು ಪಡೆದರೆ ತಪ್ಪೇನಿಲ್ಲ. ಅವರಿಗೆ ಪ್ರಥಮ ಆದ್ಯತೆ ನೀಡುತ್ತೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಅಮೆರಿಕಕ್ಕೆ ಖನಿಜ ಸಂಪನ್ಮೂಲಗಳ ಸಹಭಾಗಿತ್ವ ನೀಡುವ ಬಗ್ಗೆ ಈ ಹಿಂದೆಯೂ ಉಕ್ರೇನ್ ಪ್ರಸ್ತಾಪಿಸಿತ್ತು. ಆದರೆ ಆಗ ಕದನ ವಿರಾಮ ಮಾತುಕತೆಗೆ ರಶ್ಯದ ಮೇಲೆ ಒತ್ತಡ ಹೇರುವ ವಿಷಯವನ್ನು ಅಮೆರಿಕ ಅಧ್ಯಕ್ಷರಾಗಿದ್ದ ಜೋ ಬೈಡನ್ ಎದುರು ಮಂಡಿಸಿತ್ತು. ಉಕ್ರೇನ್ ನಲ್ಲಿ ಅಪರೂಪದ ಪ್ರಾಕೃತಿಕ ಖನಿಜಗಳಿರುವ ಪ್ರದೇಶದ 20%ದಷ್ಟು ರಶ್ಯದ ನಿಯಂತ್ರಣದಲ್ಲಿದೆ. ಒಂದು ವೇಳೆ ಕದನ ವಿರಾಮ ಒಪ್ಪಂದಕ್ಕೆ ರಶ್ಯದ ಮೇಲೆ ಒತ್ತಡ ಹಾಕದಿದ್ದರೆ ಈ ಖನಿಜ ಸಂಪನ್ಮೂಲಗಳನ್ನು ಅಮೆರಿಕದ ಶತ್ರುಗಳಾದ ಇರಾನ್ ಮತ್ತು ಉತ್ತರ ಕೊರಿಯಾಕ್ಕೆ ರಶ್ಯ ಪೂರೈಸಬಹುದು. ರಶ್ಯವನ್ನು ತಡೆದು ಮಧ್ಯ ಉಕ್ರೇನ್ ನ ದಿನಿಪ್ರೋ ಪ್ರಾಂತದಲ್ಲಿರುವ ನಮ್ಮ ಸಮೃದ್ಧ ಖನಿಜ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂದು ಈ ಹಿಂದೆ ಝೆಲೆನ್ಸ್ಕಿ ಪ್ರತಿಪಾದಿಸಿದ್ದರು.
ಟ್ರಂಪ್ ಮತ್ತು ಪುಟಿನ್ ನಡುವೆ ಸಭೆ ನಡೆಯುವುದಕ್ಕೂ ಮುನ್ನವೇ ಟ್ರಂಪ್ ಜತೆ ಸಭೆ ನಡೆಸಿ ಉಕ್ರೇನ್ ನ ಪರ ವಕಾಲತ್ತು ವಹಿಸಲು ಝೆಲೆನ್ಸ್ಕಿ ಉದ್ದೇಶಿಸಿದ್ದಾರೆ ಎಂದು ಉಕ್ರೇನ್ ಸರಕಾರದ ಮೂಲಗಳು ಹೇಳಿವೆ.