ಕಳೆದ ವರ್ಷ ವಿಶ್ವದಾದ್ಯಂತ 8,565 ವಲಸಿಗರ ಮೃತ್ಯು : ವಿಶ್ವಸಂಸ್ಥೆ ವರದಿ
Photo : PTI
ಜಿನೆವಾ: ಕಳೆದ ವರ್ಷ ವಿಶ್ವದಾದ್ಯಂತ 8,565 ವಲಸಿಗರು ಮೃತಪಟ್ಟಿದ್ದು ಇದರಲ್ಲಿ ಮೆಡಿಟರೇನಿಯನ್ ಜಲಮಾರ್ಗದ ಮೂಲಕ ಸಾಗುವಾಗ ನೀರಲ್ಲಿ ಮುಳುಗಿ ಮೃತಪಟ್ಟವರ ಪ್ರಮಾಣ ಹೆಚ್ಚಿದೆ. 2014ರಲ್ಲಿ ವಲಸಿಗರ ಸಾವಿನ ಪ್ರಮಾಣದ ಎಣಿಕೆ ಆರಂಭಗೊಂಡಂದಿನಿಂದ ಇದು ದಾಖಲೆಯಾಗಿದೆ ಎಂದು ನಿರಾಶ್ರಿತರಿಗಾಗಿನ ಅಂತರಾಷ್ಟ್ರೀಯ ಸಂಘಟನೆ(ಐಒಎಂ) ಬುಧವಾರ ವರದಿ ಮಾಡಿದೆ.
2022ರಲ್ಲಿ ಮೆಡಿಟರೇನಿಯನ್ ಜಲಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದ 2,411 ವಲಸಿಗರು ಸಾವನ್ನಪ್ಪಿದ್ದರೆ 2023ರಲ್ಲಿ ಈ ಸಂಖ್ಯೆ 3,129ಕ್ಕೆ ಏರಿದೆ. ಒಟ್ಟು ಸಾವನ್ನಪ್ಪಿದ ವಲಸಿಗರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ 20% ಹೆಚ್ಚಿದೆ. ಇದರಲ್ಲಿ ಬಹುತೇಕ ಸಾವು ನೀರಲ್ಲಿ ಮುಳುಗಿ ಸಂಭವಿಸಿದ್ದು 3,700 ವಲಸಿಗರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಮುದ್ರವನ್ನು ದಾಟುವ ಪ್ರಯತ್ನದಲ್ಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾದವರನ್ನೂ(ಅವರ ಮೃತದೇಹ ಪತ್ತೆಯಾಗದಿದ್ದರೂ) ಈ ಅಂಕಿಅಂಶದಲ್ಲಿ ಪರಿಗಣಿಸಲಾಗಿದೆ ಎಂದು ಐಒಎಂ ಹೇಳಿದೆ. `ಇದರಲ್ಲಿ ಪ್ರತಿಯೊಂದೂ ಭಯಾನಕ ಮಾನವೀಯ ದುರಂತವಾಗಿದ್ದು ಅದು ಮುಂದಿನ ವರ್ಷಗಳಲ್ಲಿ ಕುಟುಂಬಗಳು ಮತ್ತು ಸಮುದಾಯಗಳ ಮೂಲಕ ಪ್ರತಿಧ್ವನಿಸುತ್ತದೆ ಎಂದು ಐಒಎಂ ಸಹಾಯಕ ಪ್ರಧಾನ ನಿರ್ದೇಶಕಿ ಉಗೋಚಿ ಡೇನಿಯಲ್ಸ್ ಹೇಳಿದ್ದಾರೆ.
ಕಳೆದ ವರ್ಷ ಮೃತಪಟ್ಟ ವಲಸಿಗರಲ್ಲಿ ಏಶ್ಯಾ ಖಂಡದವರ ಪ್ರಮಾಣ 2,138 (2022ರಲ್ಲಿ 2070)ಕ್ಕೆ ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣ ಇರಾನ್ ಸೇರಿದಂತೆ ನೆರೆಯ ದೇಶಗಳಿಗೆ ಅಫ್ಘಾನ್ ಪ್ರಜೆಗಳು ಪಲಾಯನ ಮಾಡಲು ಪ್ರಯತ್ನಿಸಿದ್ದು. ಜತೆಗೆ, ರೊಹಿಂಗ್ಯಾ ನಿರಾಶ್ರಿತರ ಸಾವಿನ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಎಂದು ಐಒಎಂ ವಕ್ತಾರ ಜಾರ್ಜ್ ಗ್ಯಲಿಂಡೋ ಹೇಳಿದ್ದಾರೆ.
2023ರಲ್ಲಿ ಆಫ್ರಿಕಾದ ಸಹಾರಾ ಮರುಭೂಮಿಯ ಮೂಲಕ ಪಲಾಯನ ಮಾಡುವಾಗ 1,866 ವಲಸಿಗರು ಮೃತಪಟ್ಟಿದ್ದು ಇದೂ ದಾಖಲೆಯಾಗಿದೆ. ಮೃತಪಟ್ಟ ವಲಸಿಗರ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಯಾಕೆಂದರೆ ಕೊಲಂಬಿಯಾ ಮತ್ತು ಪನಾಮಾದ ನಡುವಿನ ಅಪಾಯಕಾರಿ ಡೇರಿಯನ್ ಗಡಿಯ ಮೂಲಕ ದಕ್ಷಿಣ ಅಮೆರಿಕದಿಂದ ಉತ್ತರ ಅಮೆರಿಕದ ಕಡೆ ಹಲವು ವಲಸಿಗರು ಪಲಾಯನ ಮಾಡುತ್ತಿದ್ದಾರೆ. ಆದರೆ ಈ ಪ್ರದೇಶ ದುರ್ಗಮವಾಗಿರುವುದರಿಂದ ಇಲ್ಲಿಯ ಸರಿಯಾದ ಅಂಕಿಅಂಶವನ್ನು ಸಂಗ್ರಹಿಸಲು ಕಷ್ಟವಾಗುತ್ತಿದೆ ಎಂದು ಐಒಎಂ ಹೇಳಿದೆ.
ಮೆಡಿಟರೇನಿಯಂನಲ್ಲಿ ಸಾವಿನ ಪ್ರಕರಣದಲ್ಲಿ ಹೆಚ್ಚಳ ಮತ್ತು ಟ್ಯುನೀಷಿಯಾದ ಬಳಿಯ ಇಟಾಲಿಯನ್ ದ್ವೀಪ ಲ್ಯಾಂಪೆಡುಸಾದಲ್ಲಿ ವಲಸಿಗರ ಒಳಹರಿವಿನ ಪ್ರಮಾಣ ಹೆಚ್ಚಿದ ನಂತರ 2014ರಲ್ಲಿ ಐಒಎಂ `ಕಾಣೆಯಾದ ವಲಸಿಗರ ಅಂಕಿಅಂಶ ಸಂಗ್ರಹಿಸುವ ಯೋಜನೆ'ಯನ್ನು ಆರಂಭಿಸಲಾಗಿದೆ.