ಕಾಂಗೋದಿಂದ ರವಾಂಡ ಬೆಂಬಲಿತ ಸಶಸ್ತ್ರ ಗುಂಪಿನ ವಾಪಸಾತಿಗೆ ವಿಶ್ವಸಂಸ್ಥೆ ಆಗ್ರಹ

PC : aljazeera.com
ವಿಶ್ವಸಂಸ್ಥೆ: ಕಾಂಗೋ ಗಣರಾಜ್ಯದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸ್ಪಷ್ಟಪಡಿಸಿದ್ದು ಕಾಂಗೋದಿಂದ ಬಾಹ್ಯ ಶಕ್ತಿಗಳು ತಕ್ಷಣ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದೆ.
ಪೂರ್ವ ಕಾಂಗೋದಲ್ಲಿ ವಿದೇಶಿ ಶಕ್ತಿಗಳ ಅನಧಿಕೃತ ಉಪಸ್ಥಿತಿಯನ್ನು ಖಂಡಿಸುವುದಾಗಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಹೇಳಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಬಿಂಟೊ ಕೆಯಿಟ `2 ದಶಲಕ್ಷ ಜನರಿರುವ ಪೂರ್ವ ಕಾಂಗೋದಲ್ಲಿ ಆಕ್ರಮಣ ನಡೆಸುತ್ತಿರುವ ಪಡೆಗಳು ಸಾಮೂಹಿಕ ಆತಂಕಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣವನ್ನು ಮುಚ್ಚಿರುವುದಾಗಿ ಬಂಡುಕೋರ ಪಡೆ ಘೋಷಿಸಿದೆ. ಇದರ ಅರ್ಥ ನಾವು(ವಿಶ್ವಸಂಸ್ಥೆ ನೆರವು ವಿತರಣಾ ಏಜೆನ್ಸಿ) ಕಾಂಗೋದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದೇವೆ' ಎಂದರು. ಬಂಡುಕೋರ ಪಡೆಗೆ ಬೆಂಬಲ ನೀಡುವ ಮೂಲಕ ರವಾಂಡಾವು ಕಾಂಗೋ ವಿರುದ್ಧ ಯುದ್ಧ ಘೋಷಿಸಿದೆ. ಈಗ ಗೋಮದಲ್ಲಿ ಬಂಡುಕೋರ ಪಡೆಯ ಜತೆ ರವಾಂಡಾದ ಯೋಧರ ಉಪಸ್ಥಿತಿ ಈ ಹೇಳಿಕೆಯನ್ನು ದೃಢಪಡಿಸಿದೆ' ಎಂದು ಕಾಂಗೋದ ವಿದೇಶಾಂಗ ಸಚಿವ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಿಳಿಸಿದರು.
ಕಾಂಗೋ ಸರಕಾರ ಶಾಂತಿ ಒಪ್ಪಂದದ ಅಂಶಗಳನ್ನು ಗೌರವಿಸಿದ್ದರೆ ಈ ಬಿಕ್ಕಟ್ಟನ್ನು ತಡೆಯಬಹುದಿತ್ತು ಎಂದು ವಿಶ್ವಸಂಸ್ಥೆಗೆ ರವಾಂಡಾದ ರಾಯಭಾರಿ ಪ್ರತಿಪಾದಿಸಿದ್ದಾರೆ.