ಫೆಲೆಸ್ತೀನೀಯರ ‘ಸಾಮೂಹಿಕ ಶಿಕ್ಷೆ’ಗೆ ವಿಶ್ವಸಂಸ್ಥೆ ಖಂಡನೆ
ಜಿನೆವಾ : ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯು ಫೆಲೆಸ್ತೀನೀಯರ ಸಾಮೂಹಿಕ ಶಿಕ್ಷೆಗೆ ಸಮರ್ಥನೆಯಾಗುವುದಿಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಖಂಡಿಸಿದ್ದು ತಕ್ಷಣ ಕದನ ವಿರಾಮ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 1,400ಕ್ಕೂ ಅಧಿಕ ಜನರು ಮೃತಪಟ್ಟಿದ್ದು ‘ಈ ಭಯೋತ್ಪಾದಕ ಕೃತ್ಯ’ಕ್ಕೆ ಸಮರ್ಥನೆಯಿಲ್ಲ ಎಂದರು. ಆದರೆ ಈ ದಾಳಿಗೆ ಪ್ರತಿಯಾಗಿ ನಡೆಸುವ ದಾಳಿಯು ಅಮಾಯಕ ಫೆಲೆಸ್ತೀನೀಯರನ್ನು ಸಾಮೂಹಿಕ ಶಿಕ್ಷೆಗೆ ಗುರಿಪಡಿಸುವುದರಿಂದ ಅದನ್ನೂ ಸಮರ್ಥಿಸಲಾಗದು ಎಂದು ಗುಟೆರಸ್ ಹೇಳಿದ್ದಾರೆ. ಗಾಝಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ತಕ್ಷಣ ಕದನ ವಿರಾಮ ಜಾರಿಯಾಗಬೇಕು. ಒತ್ತೆಯಾಳುಗಳನ್ನು ಹಮಾಸ್ ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆಗೊಳಿಸಬೇಕು. ಗಾಝಾದ ಮೇಲೆ ವಿಧಿಸಿರುವ ದಿಗ್ಬಂಧನವನ್ನು ಇಸ್ರೇಲ್ ಸಡಿಲಿಸಿ ಮಾನವೀಯ ನೆರವು ಪೂರೈಕೆಗೆ ಅನುವು ಮಾಡಿಕೊಡಬೇಕು ಎಂದವರು ಹೇಳಿದ್ದಾರೆ.
ಗಾಝಾ ಪಟ್ಟಿ ಪ್ರದೇಶದಲ್ಲಿ ಹಲವಾರು ಜೀವಗಳ ಹಾಗೂ ಸಂಪೂರ್ಣ ವಲಯದ ಭವಿಷ್ಯ ತೂಗುಯ್ಯಾಲೆಯಲ್ಲಿದೆ. 56 ವರ್ಷಗಳಿಂದ ಆಕ್ರಮಣಕ್ಕೆ ಒಳಗಾಗಿರುವ ಫೆಲೆಸ್ತೀನೀಯರ ತೀವ್ರ ಸಂಕಟ ಹಾಗೂ ಕುಂದುಕೊರತೆಗಳ ಬಗ್ಗೆ ವಿಶ್ವಸಂಸ್ಥೆಗೆ ಅರಿವಿದೆ. ಆದರೆ ಈ ಸಂಕಟ, ಹತಾಶೆಗಳು ಹಮಾಸ್ ನಡೆಸಿದ ದಾಳಿಯನ್ನು ಸಮರ್ಥಿಸುವುದಿಲ್ಲ ಎಂದು ಗುಟೆರಸ್ ಹೇಳಿದ್ದಾರೆ.