ಉತ್ತರ ಗಾಝಾದ ಇಡೀ ಜನಸಂಖ್ಯೆ ಅಂತ್ಯಗೊಳ್ಳುವ ಅಪಾಯ : ವಿಶ್ವ ಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ
Photo : UNO
ಜಿನಿವಾ : ಉತ್ತರ ಗಾಝಾದಲ್ಲಿ ಮುಂದುವರಿದಿರುವ ಯುದ್ಧ ಪರಿಸ್ಥಿತಿಯಿಂದಾಗಿ ಈ ಪ್ರಾಂತ್ಯದಲ್ಲಿನ ಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಈ ಪ್ರಾಂತ್ಯದಲ್ಲಿನ ಇಡೀ ಜನಸಂಖ್ಯೆ ಅಂತ್ಯವಾಗುವ ಅಪಾಯವಿದೆ ಎಂದು ಶುಕ್ರವಾರ ವಿಶ್ವ ಸಂಸ್ಥೆ ಮುಖ್ಯಸ್ಥ ಆಂಟೊನಿ ಗುಟೆರಸ್ ಎಚ್ಚರಿಸಿದ್ದಾರೆ.
ಮಧ್ಯ ಪ್ರಾಚ್ಯ ಪ್ರಾಂತ್ಯ ಪೂರ್ತಿ ಯುದ್ಧದ ದಾವಾಗ್ನಿಯಲ್ಲಿ ಬೇಯುತ್ತಿದ್ದು, ಈ ಕೂಡಲೇ ಹಗೆತನಕ್ಕೆ ವಿರಾಮ ಹೇಳಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಮಹಾಸ್ ಮತ್ತೆ ಸಂಘಟಿತವಾಗುವುದನ್ನು ತಡೆಯುವ ಸಲುವಾಗಿ ಉತ್ತರ ಗಾಝಾ ಮೇಲೆ ದಾಳಿ ನಡೆಸುತ್ತಿರುವುದಾಗಿ ಹೇಳಿಕೊಂಡಿರುವ ಇಸ್ರೇಲ್, ಕಳೆದ ತಿಂಗಳಿಂದ ಉತ್ತರ ಗಾಝಾ ಮೇಲೆ ವಾಯು ದಾಳಿ ಹಾಗೂ ಭೂ ಆಕ್ರಮಣಕ್ಕೆ ಚಾಲನೆ ನೀಡಿದೆ.
“ಉತ್ತರ ಗಾಝಾದಲ್ಲಿನ ಯುದ್ಧ ಪರಿಸ್ಥಿತಿ ಗಂಭೀರವಾಗಿದೆ” ಎಂದು ವಿಶ್ವ ಸಂಸ್ಥೆಯ ಅಂತರ್ ಸಂಸ್ಥೆ ಸ್ಥಾಯಿ ಸಮಿತಿಯ ಮುಖ್ಯಸ್ಥರು ಜಂಟಿ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
“ಉತ್ತರ ಗಾಝಾವು ಕಳೆದ ಒಂದು ತಿಂಗಳಿನಿಂದ ಆಕ್ರಮಣಕ್ಕೊಳಗಾಗಿದೆ. ಈ ಪ್ರದೇಶದ ಜನರಿಗೆ ಮೂಲಭೂತ ನೆರವು ಹಾಗೂ ಜೀವ ರಕ್ಷಕ ಸರಬರಾಜನ್ನು ನಿರಾಕರಿಸಲಾಗಿದೆ. ಈ ನಡುವೆ ಬಾಂಬ್ ದಾಳಿ ಹಾಗೂ ಇನ್ನಿತರ ದಾಳಿಗಳು ಮುಂದುವರಿದಿವೆ. ಕಳೆದ ಕೆಲವೇ ದಿನಗಳಲ್ಲಿ ನೂರಾರು ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. ಈ ಪೈಕಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಸಾವಿರಾರು ಮಂದಿಯನ್ನು ಬಲವಂತವಾಗಿ ಸ್ಥಳಾಂತರಗೊಳಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
“ಉತ್ತರ ಗಾಝಾದಲ್ಲಿನ ಇಡೀ ಜನಸಂಖ್ಯೆಯು ರೋಗರುಜಿನಗಳು, ಕ್ಷಾಮ ಹಾಗೂ ಹಿಂಸಾಚಾರದಿಂದ ಸಾವನ್ನಪ್ಪುವ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ” ಎಂದೂ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.
ಯುದ್ಧಪೀಡಿತ ಗಾಝಾದಲ್ಲಿ ಹೋರಾಡುತ್ತಿರುವ ಪ್ರತಿಯೊಬ್ಬರೂ ನಾಗರಿಕರನ್ನು ರಕ್ಷಿಸಬೇಕು ಎಂದು ಕರೆ ನೀಡಿರುವ ವಿಶ್ವ ಸಂಸ್ಥೆ ಮುಖ್ಯಸ್ಥರು, ಗಾಝಾ ಹಾಗೂ ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಿರುವವರ ಮೇಲಿನ ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು ಎಂದೂ ಆಗ್ರಹಿಸಿದ್ದಾರೆ.