ಸೊಮಾಲಿಯಾ ಪಡೆಗಳ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧ ರದ್ದುಗೊಳಿಸಿದ ವಿಶ್ವಸಂಸ್ಥೆ
File Photo
ವಿಶ್ವಸಂಸ್ಥೆ: ಸೊಮಾಲಿಯಾ ಸರಕಾರದ ಪಡೆಗಳ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧವನ್ನು ವಿಶ್ವಸಂಸ್ಥೆ ಶುಕ್ರವಾರ ತೆರವುಗೊಳಿಸಿದೆ. ಆದರೆ ಅಲ್-ಶಬಾದ್ ಸಂಘಟನೆಯ ವಿರುದ್ಧದ ನಿರ್ಬಂಧ ಮುಂದುವರಿದಿದೆ ಎಂದು ವರದಿಯಾಗಿದೆ.
ವಿಶ್ವಸಂಸ್ಥೆಯು 1992ರಲ್ಲಿ ಸೊಮಾಲಿಯಾದ ಮೇಲೆ ಸಾಮಾನ್ಯ ಶಸ್ತ್ರಾಸ್ತ್ರ ನಿರ್ಬಂಧವನ್ನು ಜಾರಿಗೆ ತಂದಿದೆ. ಆದರೆ ಅಂದಿನಿಂದ ಸೊಮಾಲಿಯಾ ಪಡೆಗಳಿಗೆ ಸಂಬಂಧಿಸಿದಂತೆ ಅದನ್ನು ಹೆಚ್ಚು ಸರಾಗಗೊಳಿಸಿದೆ. ನಿರ್ಬಂಧವು ಸೊಮಾಲಿಯಾ ಶಸ್ತ್ರಾಸ್ತ್ರ ಪಡೆಗಳ ಅಭಿವೃದ್ಧಿಗಾಗಿ ಶಸ್ತ್ರಾಸ್ತ್ರ ಪೂರೈಕೆಗೆ ಅನ್ವಯಿಸುವುದಿಲ್ಲ. ಆದರೂ ನಿರ್ಬಂಧದ ಮೇಲುಸ್ತುವಾರಿ ವಹಿಸಿರುವ ವಿಶ್ವಸಂಸ್ಥೆ ಸಮಿತಿಗೆ ಈ ಬಗ್ಗೆ ಸೂಚನೆ ನೀಡಬೇಕಿತ್ತು. ಅಲ್ಲದೆ ಕೆಲವು ಭಾರೀ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಆಕ್ಷೇಪಿಸಲು ಅವಕಾಶವಿತ್ತು.
ಶುಕ್ರವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ಮೊದಲನೆಯ ನಿರ್ಣಯದಲ್ಲಿ ಸಾಮಾನ್ಯ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಎರಡನೆಯ ನಿರ್ಣಯದಲ್ಲಿ ಅಲ್-ಶಬಾಬ್ ಸಂಘಟನೆಯ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧವನ್ನು ಮರು ಸ್ಥಾಪಿಸಲಾಗಿದ್ದು ಶಸ್ತ್ರಾಸ್ತ್ರ ಪೂರೈಕೆ, ಮಿಲಿಟರಿ ಸಾಧನಗಳ ಪೂರೈಕೆಯನ್ನು ನಿಷೇಧಿಸಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಸೊಮಾಲಿಯಾದ ರಾಯಭಾರಿ ಅಬೂಕರ್ ದಾಹಿರ್ ಒಸ್ಮಾನ್ ಸ್ವಾಗತಿಸಿದ್ದಾರೆ. ಶಸ್ತ್ರಾಸ್ತ್ರ ನಿರ್ಬಂಧ ತೆರವುಗೊಳಿಸಿರುವುದು ದೇಶದ ಭದ್ರತೆಗೆ ಎದುರಾದ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಅನುಕೂಲ ಮಾಡಿಕೊಟ್ಟಿದೆ. ಜತೆಗೆ, ಸೊಮಾಲಿಯಾ ಭದ್ರತಾ ಪಡೆಗಳ ಸಾಮಥ್ರ್ಯವನ್ನು ಹೆಚ್ಚಿಸಿ ನಾಗರಿಕರಿಗೆ ಮತ್ತು ದೇಶಕ್ಕೆ ರಕ್ಷಣೆ ಒದಗಿಸುವ ಶಕ್ತಿಯನ್ನು ವರ್ಧಿಸುತ್ತದೆ ಎಂದವರು ಹೇಳಿದ್ದಾರೆ.
ಅಲ್-ಶಬಾಬ್ ಸಂಘಟನೆ ನಡೆಸುತ್ತಿರುವ ಆಕ್ರಮಣವನ್ನು ಹಿಮ್ಮೆಟ್ಟಿಸುವಲ್ಲಿ ಇತ್ತೀಚಿನ ದಿನಗಳಲ್ಲಿ ಸೊಮಾಲಿಯಾ ಪಡೆ ಹೆಚ್ಚಿನ ಪ್ರಗತಿ ಸಾಧಿಸಿದೆ. `ಆಫ್ರಿಕನ್ ಯೂನಿಯನ್ ಟ್ರಾನಿಷನ್ ಮಿಷನ್ ಇನ್ ಸೊಮಾಲಿಯಾ(ಎಟಿಎಂಐಎಸ್) ಪಡೆಯ ಬೆಂಬಲದಿಂದ ಅಲ್-ಶಬಾಬ್ ಗುಂಪಿನ ವಶದಲ್ಲಿದ್ದ ಹಲವು ಪ್ರಾಂತಗಳನ್ನು ಮರು ವಶಪಡಿಸಿಕೊಂಡಿದೆ. ಮುಂದಿನ ವರ್ಷದ ಅಂತ್ಯಕ್ಕೆ ಎಟಿಎಂಐಎಸ್ ಪಡೆ ಸೊಮಾಲಿಯಾದಿಂದ ಸಂಪೂರ್ಣ ವಾಪಸಾಗಬೇಕು ಮತ್ತು ದೇಶದ ಭದ್ರತೆಯನ್ನು ಸೊಮಾಲಿಯಾದ ಸೇನೆ ಮತ್ತು ಪೊಲೀಸ್ ಪಡೆ ನಿರ್ವಹಿಸಬೇಕೆಂದು ವಿಶ್ವಸಂಸ್ಥೆ ನಿರ್ಣಯ ಸೂಚಿಸಿದೆ.