ಕಾಂಗೋ ಗಣರಾಜ್ಯ : ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ ವಾಪಸಾತಿ ಆರಂಭ
Photo:aa.com.tr
ಕಿನ್ಷಾಸ: ಕಾಂಗೋ ಗಣರಾಜ್ಯದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ `ಮೊನುಸ್ಕೊ'ದ ವಾಪಸಾತಿ ಪ್ರಕ್ರಿಯೆಗೆ ಬುಧವಾರ ಚಾಲನೆ ದೊರಕಿದೆ. ಕಾಂಗೋದಲ್ಲಿ ಶಾಂತಿಪಾಲನಾ ಪಡೆಯ ಪ್ರಥಮ ನೆಲೆಯನ್ನು ರಾಷ್ಟ್ರೀಯ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ರವಾಂಡಾ ಮತ್ತು ಬುರುಂಡಿ ದೇಶಗಳ ಗಡಿಭಾಗದ ಸಮೀಪದ ಕಮನ್ಯೋಲಾ ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಮತ್ತು ಪಾಕಿಸ್ತಾನ(ಶಾಂತಿಪಾಲನ ಪಡೆಯ ಉಸ್ತುವಾರಿ)ಗಳ ಧ್ವಜದ ಸ್ಥಾನದಲ್ಲಿ ಕಾಂಗೋ ಗಣರಾಜ್ಯದ ಧ್ವಜವನ್ನು ಇಡಲಾಯಿತು. ಪೂರ್ವ ಕಾಂಗೋದಲ್ಲಿ ಹಿಂಸಾಚಾರ ಉಲ್ಬಣಿಸಿರುವ ಸಂದರ್ಭದಲ್ಲಿ ಶಾಂತಿಪಾಲನಾ ಪಡೆಯನ್ನು ವಾಪಾಸು ಕಳುಹಿಸುವ ಕಾಂಗೋ ಸರಕಾರದ ಆಗ್ರಹಕ್ಕೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ದೇಶದ ಪೂರ್ವ ಭಾಗದಲ್ಲಿ 3 ದಶಕಗಳಿಂದ ತೀವ್ರಗೊಂಡಿರುವ ಸಶಸ್ತ್ರ ಗುಂಪುಗಳು ಹಾಗೂ ಗೆರಿಲ್ಲಾ ಪಡೆಗಳ ದಾಳಿಯಿಂದ ಜನರನ್ನು ರಕ್ಷಿಸಲು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ ಪರಿಣಾಮಕಾರಿಯಾಗಿಲ್ಲ ಎಂದು ಕಾಂಗೋ ಸರಕಾರ ಪ್ರತಿಪಾದಿಸಿದೆ. 1999ರಲ್ಲಿ ಕಾಂಗೋಗೆ ಆಗಮಿಸಿದ್ದ ಶಾಂತಿಪಾಲನಾ ಪಡೆಯನ್ನು ಹಂತಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳುವ ನಿರ್ಣಯವನ್ನು ಕಳೆದ ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದಿಸಿದೆ. ಕಾಂಗೋ ಗಣರಾಜ್ಯದ ಇಟೂರಿ, ದಕ್ಷಿನ ಕಿವು ಮತ್ತು ಉತ್ತರ ಕಿವು ಪ್ರಾಂತಗಳಲ್ಲಿ ವಿಶ್ವಸಂಸ್ಥೆಯ ಸುಮಾರು 13,500 ಯೋಧರು ಮತ್ತು 2,000 ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಂತಿಪಾಲನಾ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ 3 ಹಂತಗಳಲ್ಲಿ ನಡೆಯಲಿದ್ದು ಪ್ರಾಥಮಿಕ ಹಂತದಲ್ಲಿ ಬುರುಂಡಿ ದೇಶದ ಗಡಿಭಾಗದಲ್ಲಿರುವ ಸೇನಾನೆಲೆಯನ್ನು ಹಸ್ತಾಂತರಿಸಲಾಗುವುದು. ಪ್ರಥಮ ಹಂತದಲ್ಲಿ ಎಪ್ರಿಲ್ ಅಂತ್ಯದೊಳಗೆ ದಕ್ಷಿಣ ಕಿವು ಪ್ರಾಂತದಿಂದ ಶಾಂತಿಪಾಲನಾ ಯೋಧರು ಜೂನ್ 30ರೊಳಗೆ ನಾಗರಿಕ ಸಿಬಂದಿ ವಾಪಸಾಗಲಿದ್ದಾರೆ. ಎಪ್ರಿಲ್ ಅಂತ್ಯದೊಳಗೆ ಈ ಪ್ರಾಂತದಲ್ಲಿರುವ 14 ನೆಲೆಗಳನ್ನು ಕಾಂಗೋ ಗಣರಾಜ್ಯದ ಭದ್ರತಾ ಪಡೆಗಳಿಗೆ ಹಸ್ತಾಂತರಿಸಲಾಗುವುದು.
ಈ ಮಧ್ಯೆ, ಉತ್ತರ ಕಿವು ಪ್ರಾಂತದಲ್ಲಿ ತುತ್ಸಿ ನೇತೃತ್ವದ ಎಂ23 ಬಂಡುಗೋರರು ಪ್ರಾಂತದ ಹಲವು ಭಾಗಗಳನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಕಿವು ಪ್ರಾಂತದ ರಾಜಧಾನಿ ಗೋಮಾ ನಗರದ ಸುತ್ತಲೂ ಕಳೆದ ತಿಂಗಳಿಂದ ತೀವ್ರ ಸಂಘರ್ಷ ಭುಗಿಲೆದ್ದಿದೆ. ಶಾಂತಿಪಾಲನಾ ಪಡೆ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಕಾಂಗೋ ಗಣರಾಜ್ಯದ ಭದ್ರತಾ ಪಡೆಗಳನ್ನು ಬಲಪಡಿಸಬೇಕು ಮತ್ತು ನಾಗರಿಕರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕು ಎಂದು ವಿಶ್ವಸಂಸ್ಥೆ ಒತ್ತಿಹೇಳಿದೆ. ಕಾಂಗೋ ಗಣರಾಜ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸುಮಾರು 6 ದಶಲಕ್ಷ ಜನತೆ ನೆಲೆ ಕಳೆದುಕೊಂಡಿದ್ದಾರೆ. ಈ ವರ್ಷಾಂತ್ಯದೊಳಗೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಸಂಪೂರ್ಣವಾಗಿ ಕಾಂಗೋದಿಂದ ವಾಪಸಾಗಬೇಕು ಎಂದು ಕಾಂಗೋ ಗಣರಾಜ್ಯದ ವಿದೇಶಾಂಗ ಸಚಿವ ಕ್ರಿಸ್ಟೋಫ್ ಲುತುಂಡುಲಾ ಆಗ್ರಹಿಸಿದ್ದಾರೆ.