ಹಡಗುಗಳ ಮೇಲಿನ ದಾಳಿ ನಿಲ್ಲಿಸಲು ಹೌದಿಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಆಗ್ರಹ
ವಿಶ್ವಸಂಸ್ಥೆ
ವಿಶ್ವಸಂಸ್ಥೆ: ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಹಡಗು ಸಾಗಣೆಯ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಯೆಮನ್ ನ ಹೌದಿಗಳಿಗೆ ಕರೆ ನೀಡಿದೆ.
ಈ ಕಾನೂನುಬಾಹಿರ ಕೃತ್ಯಗಳು ಪ್ರಾದೇಶಿಕ ಸ್ಥಿರತೆ, ನೌಕಾಯಾನದ ಸ್ವಾತಂತ್ರ್ಯ ಮತ್ತು ಜಾಗತಿಕ ಆಹಾರ ಪೂರೈಕೆಗೆ ಬೆದರಿಕೆ ಒಡ್ಡಿದೆ ಎಂದು ಭದ್ರತಾ ಮಂಡಳಿಯ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
2024ರಲ್ಲಿ ನಡೆದ ಭದ್ರತಾ ಮಂಡಳಿಯ ಪ್ರಥಮ ಅಧಿಕೃತ ಸಭೆಯಲ್ಲಿ ಮಾತನಾಡಿದ ಸದಸ್ಯರು `ಹೌದಿಗಳು ನವೆಂಬರ್ 19ರಂದು ಅಪಹರಿಸಿದ್ದ ಜಪಾನ್ ನಿರ್ವಹಣೆಯ ಸರಕು ನೌಕೆ `ಗ್ಯಾಲಕ್ಸಿ ಲೀಡರ್' ಮತ್ತು ಅದರ ಸಿಬ್ಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಹೌದಿಗಳ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಕೆಲವು ಸದಸ್ಯರು ಭದ್ರತಾ ಮಂಡಳಿಯನ್ನು ಆಗ್ರಹಿಸಿದರು.
`ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದೆ. ಈ ದಾಳಿಗಳು ಸಮುದ್ರಯಾನ ಭದ್ರತೆ, ಅಂತರಾಷ್ಟ್ರೀಯ ಹಡಗು ಸಾಗಣೆ ಮತ್ತು ವಾಣಿಜ್ಯ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಮತ್ತು ಯೆಮನ್ ನಲ್ಲಿನ ಸೂಕ್ಷ್ಮ ಮಾನವೀಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ. ಯುದ್ಧದಿಂದ ಜರ್ಝರಿತಗೊಂಡಿರುವ ದೇಶಕ್ಕೆ ನೆರವಿನ ವಿತರಣೆಗೆ ಅಡ್ಡಿಯಾಗುತ್ತಿದೆ' ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿ ಕ್ರಿಸ್ ಲು ಹೇಳಿದ್ದಾರೆ.
ಯೆಮನ್ ರಾಜಧಾನಿ ಸನಾ ಸೇರಿದಂತೆ ಹಲವು ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿರುವ ಇರಾನ್ ಬೆಂಬಲಿತ ಹೌದಿ ಬಂಡುಗೋರರು ಕೆಂಪು ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಸರಕು ಸಾಗಣೆ ನೌಕೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ವಾಣಿಜ್ಯ ಹಡಗುಗಳಿಗೆ ಮತ್ತು ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡುವ ಯಾವುದೇ ಕೃತ್ಯಗಳಿಂದ ಹಿಂದೆ ಸರಿಯುವಂತೆ ವಿಶ್ವಸಂಸ್ಥೆಯಲ್ಲಿನ ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಹೌದಿಗಳನ್ನು ಒತ್ತಾಯಿಸಿದ್ದಾರೆ. ಆದರೆ, ಗಾಝಾದಲ್ಲಿ ಮುಂದುವರಿದಿರುವ ಹಮಾಸ್-ಇಸ್ರೇಲ್ ಸಂಘರ್ಷ ಈ ಸಮಸ್ಯೆಯ ಮೂಲವಾಗಿದೆ. ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ತಡೆ ನೀಡುವ ಮೂಲಕ ಅಮೆರಿಕ ಗಾಯಕ್ಕೆ ಉಪ್ಪು ಸವರುತ್ತಿದೆ ಎಂದವರು ಟೀಕಿಸಿದ್ದಾರೆ.
ಅಂತರಾಷ್ಟ್ರೀಯ ಸರಕು ಮತ್ತು ಇಂಧನ ವ್ಯಾಪಾರಕ್ಕೆ ಪ್ರಮುಖ ಹಡಗು ಮಾರ್ಗವಾಗಿರುವ ಕೆಂಪು ಸಮುದ್ರ ಮಾರ್ಗದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಸಾಮಾನ್ಯ ಹಿತಾಸಕ್ತಿಯಾಗಿದೆ. ನಾಗರಿಕ ಅಥವಾ ಸರಕು ಹಡಗುಗಳ ಮೇಲಿನ ದಾಳಿಯನ್ನು ಚೀನಾ ವಿರೋಧಿಸುತ್ತದೆ. ಕೆಂಪು ಸಮುದ್ರದಲ್ಲಿ ಹಡಗು ಮಾರ್ಗಗಳ ಭದ್ರತೆಯನ್ನು ಸುರಕ್ಷಿತಗೊಳಿಸಲು ಸಂಬಂಧಿಸಿದ ಎಲ್ಲರೂ ರಚನಾತ್ಮಕ ಮತ್ತು ಜವಾಬ್ದಾರಿಯುತ ಪಾತ್ರ ನಿರ್ವಹಿಸುವ ಅಗತ್ಯವಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.
ಹೌದಿಗಳಿಗೆ ಅಮೆರಿಕದ ಅಂತಿಮ ಎಚ್ಚರಿಕೆ
ವಾಷಿಂಗ್ಟನ್, ಜಾಗತಿಕ ವಾಣಿಜ್ಯ ಕ್ಷೇತ್ರಕ್ಕೆ ನಿರಂತರ ಅಡ್ಡಿಯಾಗಿರುವ ಸಮುದ್ರ ದಾಳಿಯನ್ನು ತಕ್ಷಣ ನಿಲ್ಲಿಸದಿದ್ದರೆ ಊಹಿಸಲಾಗದಷ್ಟು ತೀವ್ರ ಮಟ್ಟದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯೆಮನಿನ ಹೌದಿ ಬಂಡುಗೋರರಿಗೆ ಅಮೆರಿಕ ಮತ್ತದರ 12 ಮಿತ್ರರಾಷ್ಟ್ರಗಳು ಅಂತಿಮ ಎಚ್ಚರಿಕೆ ರವಾನಿಸಿವೆ.
`ನಮ್ಮ ಸಂದೇಶ ಸ್ಪಷ್ಟವಾಗಿದೆ. ಹೌದಿಗಳು ತಕ್ಷಣ ತಮ್ಮ ಕಾನೂನುಬಾಹಿರ ಕೃತ್ಯಗಳಿಂದ ಹಿಂದಕ್ಕೆ ಸರಿಯಬೇಕು ಮತ್ತು ಅಕ್ರಮವಾಗಿ ಸೆರೆಹಿಡಿದಿರುವ ನೌಕೆಗಳು ಮತ್ತು ಅದರ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಬೇಕು. ಈ ಪ್ರದೇಶದ ನಿರ್ಣಾಯಕ ಜಲಮಾರ್ಗಗಳಲ್ಲಿ ಜೀವಗಳು, ಜಾಗತಿಕ ಆರ್ಥಿಕತೆ ಮತ್ತು ವಾಣಿಜ್ಯದ ಮುಕ್ತ ಹರಿವಿಗೆ ಬೆದರಿಕೆಯನ್ನು ಮುಂದುವರಿಸಿದರೆ ಹೌದಿಗಳು ಊಹಿಸಲಾಗದ ಮಟ್ಟದ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಅಮೆರಿಕದ ಶ್ವೇತಭವನ ಎಚ್ಚರಿಕೆ ನೀಡಿದೆ.
ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಜಪಾನ್ ಸೇರಿದಂತೆ ಮಿತ್ರದೇಶಗಳ ಈ ಜಂಟಿ ಹೇಳಿಕೆಯು ಹೌದಿಗಳಿಗೆ ನೀಡಿರುವ ಅಂತಿಮ ಎಚ್ಚರಿಕೆಯಾಗಿದೆ ಎಂದು ಶ್ವೇತಭವನ ಹೇಳಿದೆ. ದಾಳಿ ಮುಂದುವರಿಸಿದರೆ ಹೌದಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಯ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಅಮೆರಿಕದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಹೌದಿಗಳ ದಾಳಿಯ ಕುರಿತು ಕೈಗೊಳ್ಳಬಹುದಾದ ಆಯ್ಕೆಗಳ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಷ್ಟ್ರೀಯ ಭದ್ರತಾ ತಂಡದ ಜತೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿ ಹೇಳಿದೆ. ಹೌದಿಗಳು ಸರಕು ನೌಕೆಗಳ ಮೇಲಿನ ದಾಳಿ ನಿಲ್ಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೂ ಎಚ್ಚರಿಕೆ ನೀಡಿದ್ದಾರೆ.