ಇರಾನ್ ದೂತಾವಾಸದ ಮೇಲಿನ ದಾಳಿ : ಖಂಡನಾ ಹೇಳಿಕೆ ಅನುಮೋದಿಸಲು ಭದ್ರತಾ ಮಂಡಳಿ ವಿಫಲ
ಅಮೆರಿಕ, ಬ್ರಿಟನ್, ಫ್ರಾನ್ಸ್ ವಿರೋಧ
ವಿಶ್ವಸಂಸ್ಥೆ ಭದ್ರತಾ ಮಂಡಳಿ | Photo: pti
ವಿಶ್ವಸಂಸ್ಥೆ: ಸಿರಿಯಾದಲ್ಲಿ ಇರಾನ್ ರಾಯಭಾರಿ ಕಚೇರಿಯ ಮೇಲೆ ನಡೆಸಿದ ದಾಳಿಯನ್ನು ಖಂಡಿಸುವ ಹೇಳಿಕೆಯನ್ನು ಅನುಮೋದಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಬುಧವಾರ ವಿಫಲವಾಗಿದೆ.
ರಶ್ಯ ಮಂಡಿಸಿದ ಖಂಡನಾ ಹೇಳಿಕೆಗೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ವಿರೋಧಿಸಿದ್ದರಿಂದ ಹೇಳಿಕೆ ಅನುಮೋದನೆಗೆ ತಡೆಯಾಗಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿರುವುದಾಗಿ ಇರಾನ್ ಪ್ರತಿಪಾದಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪತ್ರಿಕಾ ಹೇಳಿಕೆಯನ್ನು 15 ಸದಸ್ಯ ದೇಶಗಳು ಅವಿರೋಧವಾಗಿ ಸಮ್ಮತಿಸಿದರೆ ಮಾತ್ರ ಬಿಡುಗಡೆಗೊಳಿಸಬಹುದು. ಎಪ್ರಿಲ್ 1ರಂದು ದಮಾಸ್ಕಸ್ನಲ್ಲಿ ಏನು ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಯ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಲ್ಲಿ ಒಮ್ಮತದ ಅಭಿಪ್ರಾಯ ಮೂಡಿಲ್ಲ ಎಂದು ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗಳು ಹೇಳಿದ್ದಾರೆ.
`ಇದು ಪಾಶ್ಚಿಮಾತ್ಯ `ತ್ರಿವಳಿ'ಗಳ ದ್ವಿಮುಖ ನೀತಿಗೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಅಂತರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿ ಅವರ ನೈಜ ಮತ್ತು ವಾಸ್ತವಿಕ ಧೋರಣೆಯನ್ನು ಇದು ಬಹಿರಂಗಪಡಿಸಿದೆ' ಎಂದು ವಿಶ್ವಸಂಸ್ಥೆಗೆ ರಶ್ಯದ ಸಹಾಯಕ ರಾಯಭಾರಿ ಡಿಮಿಟ್ರಿ ಪೊಲ್ಯಾಂಸ್ಕಿಯ್ ಹೇಳಿದ್ದಾರೆ. ರಾಜತಾಂತ್ರಿಕ ಕಟ್ಟಡದ ಆವರಣಗಳ ಮೇಲಿನ ದಾಳಿಯನ್ನು ಖಂಡಿಸುವ ಹೇಳಿಕೆಯನ್ನು ಈ ಹಿಂದೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹಲವು ಬಾರಿ ಅನುಮೋದಿಸಿದೆ. ದಾಳಿಯನ್ನು ಯುರೋಪಿಯನ್ ಯೂನಿಯನ್ ಬುಧವಾರ ಖಂಡಿಸಿದ್ದು ರಾಜತಾಂತ್ರಿಕ ಮತ್ತು ದೂತಾವಾಸದ ಆವರಣಗಳು ಹಾಗೂ ಸಿಬಂದಿಗಳ ರಕ್ಷಣೆಯನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಿದೆ.
ದಮಾಸ್ಕಸ್ನಲ್ಲಿ ದಾಳಿಗೊಳಗಾದ ಕಟ್ಟಡ ದೂತಾವಾಸವೇ ಎಂಬುದು ಸ್ಪಷ್ಟವಾಗಿಲ್ಲ. ದೂತಾವಾಸ ಎಂಬುದು ದೃಢಪಟ್ಟರೆ ಈ ದಾಳಿ ಅತ್ಯಂತ ಕಳವಳಕಾರಿ ಎಂದು ಅಮೆರಿಕ ಹೇಳಿದೆ. ದಮಾಸ್ಕಸ್ನಲ್ಲಿ ಇರಾನ್ನ ಪ್ರಧಾನ ದೂತಾವಾಸ ಸಂಕೀರ್ಣ(ಕಾಂಪ್ಲೆಕ್ಸ್)ಗೆ ತಾಗಿಕೊಂಡಿರುವ ಕಾನ್ಸುಲರ್ ಕಟ್ಟಡ ದಾಳಿಯಲ್ಲಿ ನೆಲಸಮಗೊಂಡಿದ್ದು ಇರಾನ್ನ ರೆವೊಲ್ಯುಷನರಿ ಗಾಡ್ರ್ಸ್ನ 7 ಸದಸ್ಯರು ಹತರಾಗಿದ್ದರು. ದಾಳಿಯ ಹೊಣೆಯನ್ನು ಇಸ್ರೇಲ್ ವಹಿಸಿಕೊಂಡಿಲ್ಲ. ಆದರೆ ಇಸ್ರೇಲ್ ವಿಶ್ವಸಂಸ್ಥೆಯ ಸನದು(ಚಾರ್ಟರ್) ಮತ್ತು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಇರಾನ್ ಆರೋಪಿಸಿದೆ.
ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದ 1961ರ ವಿಯೆನ್ನಾ ನಿರ್ಣಯ ಮತ್ತು ದೂತಾವಾಸ ಸಂಬಂಧಗಳ ಕುರಿತಾದ 1963ರ ವಿಯೆನ್ನಾ ಸಮ್ಮೇಳನದ ನಿರ್ಣಯದ ಪ್ರಕಾರ ರಾಜತಾಂತ್ರಿಕ ಮತ್ತು ದೂತಾವಾಸದ ಆವರಣವನ್ನು ಉಲ್ಲಂಘಿಸಲಾಗದು. ಆದರೆ ಇದನ್ನು ರಾಜತಾಂತ್ರಿಕ ಮತ್ತು ದೂತಾವಾಸದ ಕಾರ್ಯನಿರ್ವಹಣೆಗೆ ವಿರುದ್ಧವಾದ ಉದ್ದೇಶಗಳಿಗೆ ಬಳಸಬಾರದು'.
`ರಾಜತಾಂತ್ರಿಕ ಏಜೆಂಟರು ಸೇರಿದಂತೆ ಅಂತರಾಷ್ಟ್ರೀಯವಾಗಿ ಸುರಕ್ಷಿತ ವ್ಯಕ್ತಿಗಳ ವಿರುದ್ಧ ಅಪರಾಧ ತಡೆಗಟ್ಟುವಿಕೆ ಮತ್ತು ಶಿಕ್ಷೆಯ ಕುರಿತಾದ 1973ರ ನಿರ್ಣಯದ ವ್ಯಾಪ್ತಿಯಡಿ ಈ ಪ್ರಕರಣ ಬರುತ್ತದೆ ಎಂದು ಇರಾನ್ ಪ್ರತಿಪಾದಿಸಿದೆ.