ಘೋರ ದುರಂತದ ಅಂಚಿನಲ್ಲಿ ಗಾಝಾ ಪಟ್ಟಿ; ವಿಶ್ವಸಂಸ್ಥೆ ಎಚ್ಚರಿಕೆ
ಹದಗೆಟ್ಟ ನೈರ್ಮಲ್ಯ ಪರಿಸ್ಥಿತಿ, ಸಾಮೂಹಿಕ ರೋಗದ ಆತಂಕ
Photo- PTI
ಕೈರೊ: ಇಂಧನ ಕೊರತೆ ಹಾಗೂ ಹದಗೆಡುತ್ತಿರುವ ನೈರ್ಮಲ್ಯದ ಪರಿಸ್ಥಿತಿ ಗಾಝಾ ಪಟ್ಟಿಯನ್ನು ಘೋರ ದುರಂತದ ಅಂಚಿಗೆ ತಂದಿರಿಸಿದ್ದು ರೋಗ ಹರಡುವ ಅಪಾಯ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಎಚ್ಚರಿಕೆ ನೀಡಿದೆ.
ಮುತ್ತಿಗೆಗೆ ಒಳಗಾಗಿರುವ ಫೆಲೆಸ್ತೀನಿಯನ್ ಭೂಪ್ರದೇಶದಲ್ಲಿ ಸಾಮೂಹಿಕ ರೋಗ ಹರಡುವ ಗಂಭೀರ ಬೆದರಿಕೆಯಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ಹೇಳಿದೆ. ಇಂಧನಗಳ ಕೊರತೆ, ನೈರ್ಮಲ್ಯ ಸೇವೆಗಳ ಸ್ಥಗಿತವನ್ನು ಜಗತ್ತು ಆತಂಕದಿಂದ ಗಮನಿಸುತ್ತಿದೆ. ಜತೆಗೆ, ಫಿರಂಗಿ, ತೋಪುಗಳು ಮತ್ತು ಬಾಂಬ್ ಗಳ ಅಬ್ಬರವು ಸಾಮೂಹಿಕ ರೋಗ ಹರಡಲು ಪರಿಪೂರ್ಣ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದು ಘೋರ ದುರಂತ ಸಂಭವಿಸಲು ಪರಿಪೂರ್ಣ ಸ್ಥಿತಿಯಾಗಿದೆ' ಎಂದು ಯುನಿಸೆಫ್ ವಕ್ತಾರ ಜೇಮ್ಸ್ ಎಲ್ಡರ್ ಈಜಿಪ್ಟಿನ ಕೈರೊದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ನಲ್ಲಿ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
`ಗಾಝಾದಲ್ಲಿ ನೀರಿನ ಹತಾಶ ಕೊರತೆಯಿದೆ. ಅಮೇಧ್ಯ(ಮಲ, ಮೂತ್ರ) ಜನನಿಬಿಡ ವಸಾಹತುಗಳಲ್ಲಿ ಹರಡಿಕೊಂಡಿದೆ. ಶೌಚಾಲಯಗಳ ಕೊರತೆಯಿದೆ, ಇದ್ದ ಶೌಚಾಲಯಗಳೂ ಹಾನಿಗೊಂಡಿದ್ದು ಬಳಕೆಗೆ ಅಯೋಗ್ಯವಾಗಿದೆ. ನೀರಿನ ಕೊರತೆಯಿಂದ ಕೈತೊಳೆಯುವುದು, ಸ್ನಾನ ಸೇರಿದಂತೆ ವೈಯಕ್ತಿಕ ನೈರ್ಮಲ್ಯ ಮತ್ತು ಶುಚಿಗೊಳಿಸುವಿಕೆಗೆ ತೀವ್ರವಾದ ನಿರ್ಬಂಧವಿದೆ. ಗಾಝಾದಲ್ಲಿ ಅಂದಾಜು 8 ಲಕ್ಷ ಮಕ್ಕಳು ತಮ್ಮ ಮನೆಯಿಂದ ಸ್ಥಳಾಂತರಗೊಂಡಿರುವುದರಿಂದ ವ್ಯಾಪಕವಾದ ಜೀವಹಾನಿಯ ಸಂಭಾವ್ಯತೆಯು ಗಮನಾರ್ಹವಾಗಿ ಉಲ್ಬಣಗೊಳ್ಳುತ್ತಿದೆ' ಎಂದವರು ಹೇಳಿದ್ದಾರೆ.
ಗಾಝಾದಲ್ಲಿ ಈಗ ಮಳೆ ಆರಂಭವಾಗಿರುವುದನ್ನು ಗಮನಿಸುವುದೂ ಮುಖ್ಯವಾಗಿದೆ. ಈಗ ಒಟ್ಟಾಗಿ, ಮಕ್ಕಳು ಸಾಮೂಹಿಕ ರೋಗ ಹರಡುವಿಕೆಯ ಗಂಭೀರ ಅಪಾಯ ಎದುರಿಸುತ್ತಾರೆ. ಇದು ಸಹಜವಾಗಿ ಮಾರಣಾಂತಿಕವಾಗಿದೆ ಎಂದು ಎಲ್ಡರ್ ಹೇಳಿದ್ದಾರೆ.
ಗಾಝಾ ಪಟ್ಟಿಯಲ್ಲಿ ಕಾಲರಾ ಹರಡುವಿಕೆಯ ಅಪಾಯದ ಬಗ್ಗೆ ಯುನಿಸೆಫ್ ಕಳವಳ ವ್ಯಕ್ತಪಡಿಸಿದ್ದು ಇದು ಮಕ್ಕಳ ಸಾವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಹೇಳಿದೆ.