ಹಿಂದು ಮಹಾಸಾಗರದಲ್ಲಿ ಅತಂತ್ರ ಸ್ಥಿತಿಯಲ್ಲಿರುವ 185 ರೊಹಿಂಗ್ಯಗಳು: ರಕ್ಷಣೆಗೆ ವಿಶ್ವಸಂಸ್ಥೆ ಆಗ್ರಹ
ಸಾಂದರ್ಭಿಕ ಚಿತ್ರ
ವಿಶ್ವಸಂಸ್ಥೆ: ಹಿಂದು ಮಹಾಸಾಗರದಲ್ಲಿ ತೊಂದರೆಗೊಳಗಾದ ದೋಣಿಯಲ್ಲಿರುವ 185 ರೊಹಿಂಗ್ಯಾಗಳ ತುರ್ತು ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ಆಗ್ರಹಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ ಹಿಂದು ಮಹಾಸಾಗರದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಬಳಿ ಈ ದೋಣಿ ಕಾಣಿಸಿಕೊಂಡಿದ್ದು ಇದರಲ್ಲಿ 88 ಮಹಿಳೆಯರು ಮತ್ತು ಸುಮಾರು 70 ಮಕ್ಕಳ ಸಹಿತ 185 ಜನರಿದ್ದಾರೆ. ಇವರಲ್ಲಿ 12 ಮಂದಿಯ ಸ್ಥಿತಿ ಗಂಭೀರವಾಗಿದ್ದು ಒಬ್ಬ ವ್ಯಕ್ತಿ ಈಗಾಗಲೇ ಮೃತಪಟ್ಟಿರುವ ಮಾಹಿತಿಯಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್(ಯುಎನ್ಎಚ್ಸಿಆರ್) ವಕ್ತಾರ ಬಾಬರ್ ಬಲೋಚ್ರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
ಸಕಾಲಿಕ ಕಾರ್ಯಾಚರಣೆ ನಡೆಸಿ ಅವರನ್ನು ಹತ್ತಿರದ ದೇಶಕ್ಕೆ ಸ್ಥಳಾಂತರಿಸದಿದ್ದರೆ ಇನ್ನಷ್ಟು ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ. ಇದು ನಿಜವಾಗಿಯೂ ಹತಾಶ ಪರಿಸ್ಥಿತಿ. ಸಕಾಲಿಕ ಕಾರ್ಯಾಚರಣೆಯಿಂದ ಹಲವು ಜೀವಗಳನ್ನು ಉಳಿಸಬಹುದು. ಬೃಹತ್ ಪ್ರಮಾಣದ ಮಾನವ ವಿಪತ್ತನ್ನು ತಪ್ಪಿಸಲು ಈ ಪ್ರದೇಶದ ಎಲ್ಲಾ ದೇಶಗಳು ತಮ್ಮ ಶೋಧ ಮತ್ತು ಪಾರುಗಾಣಿಕಾ ವ್ಯವಸ್ಥೆಯನ್ನು ನಿಯೋಜಿಸುವ ಅಗತ್ಯವಿದೆ. ಈ ಪ್ರದೇಶದ ಎಲ್ಲಾ ಕರಾವಳಿ ಅಧಿಕಾರಿಗಳನ್ನು ಸಂಪರ್ಕಿಸಿ ವಲಸಿಗರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ' ಎಂದು ಯುಎನ್ಎಚ್ಸಿಆರ್ ಹೇಳಿದೆ.
ಯುಎನ್ಎಚ್ಸಿಆರ್ ಪ್ರಕಾರ, ಪ್ರತೀ ವರ್ಷ ಸಾವಿರಾರು ಮಂದಿ ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಿಂದ ಮಲೇಶ್ಯಾ ಅಥವಾ ಇಂಡೊನೇಶ್ಯಾಕ್ಕೆ ಅಪಾಯಕಾರಿ ಸಮುದ್ರ ಪ್ರಯಾಣ ಕೈಗೊಳ್ಳುತ್ತಾರೆ.