ಗಾಝಾದಲ್ಲಿ ನಿಲ್ಲದ ಹತ್ಯಾಕಾಂಡ: ಶಾಲೆಯ ಮೇಲೆ ಶೆಲ್ ದಾಳಿಗೆ 20 ಮಂದಿ ಬಲಿ
Photo: twitter.com/FactualNarrator
ಗಾಝಾ: ಹಮಾಸ್ ಸಂಘಟನೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಗಾಝಾ ಪ್ರದೇಶದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ 20 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಗಾಝಾದ ಶಾಲೆಯ ಮೇಳೆ ಶೆಲ್ ದಾಳಿ ನಡೆದಿದ್ದು, ಈ ವೇಳೆ ಮಕ್ಕಳು ಅಸುನೀಗಿದ್ದಾರೆ ಎಂದು ಹಮಾಸ್ ನ ಆರೋಗ್ಯ ಇಲಾಖೆ ಪ್ರಕಟಿಸಿದೆ.
ಯುದ್ಧಪೀಡಿತ ಉತ್ತರ ಗಾಝಾದಲ್ಲಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಮೇಲೆ ಇಸ್ರೇಲಿನ ವಾಯುಪಡೆ ದಾಳಿ ಮಾಡಿದ ಪ್ರತ್ಯೇಕ ಘಟನೆಯಲ್ಲಿ 15 ಮಂದಿ ಮೃತಪಟ್ಟು, ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ.
ಈ ಮಧ್ಯೆ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಮಾನವೀಯ ನೆರವಿಗಾಗಿ ಕದನ ವಿರಾಮ ಘೋಷಿಸಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿರುವ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ. ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಇಸ್ರೇಲಿಗರನ್ನು ಬಿಡುಗಡೆ ಮಾಡದಿದ್ದರೆ ಇನ್ನಷ್ಟು ತೀವ್ರ ದಾಳಿ ನಡೆಸುವುದಾಗಿ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.
ಈ ಸಂಘರ್ಷ ಇಡೀ ಪ್ರದೇಶಕ್ಕೆ ಹರಡುವ ಭೀತಿ ಎದುರಾಗಿದ್ದು, ಲೆಬನಾನ್ ನ ಇರಾನ್ ಬೆಂಬಲಿತ ಸಂಘಟನೆ ಹೆಝ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಹೇಳಿಕೆ ನೀಡಿ, ಯುದ್ಧದಿಂದ ಹೊರಗುಳಿಯಬೇಕು ಎಂಬ ಅಮೆರಿಕದ ಎಚ್ಚರಿಕೆಯನ್ನು ನಾವು ಪಾಲಿಸುವುದಿಲ್ಲ. ಸಂಪೂರ್ಣವಾಗಿ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.