ರಶ್ಯದಿಂದ ರಾಸಾಯನಿಕ ಅಸ್ತ್ರ ಬಳಕೆ: ಅಮೆರಿಕ ಆರೋಪ, ಹೊಸ ನಿರ್ಬಂಧ ಜಾರಿ
PC : X@KyivPost
ವಾಷಿಂಗ್ಟನ್: ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶವನ್ನು ಉಲ್ಲಂಘಿಸಿ ರಶ್ಯವು ಉಕ್ರೇನ್ ಪಡೆಗಳ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಆರೋಪಿಸಿದ್ದು ರಶ್ಯದ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಿದೆ.
ರಾಸಾಯನಿಕ ವಸ್ತು ಕ್ಲೊರೊಪಿಸಿನ್ ಜತೆಗೆ ಅಶ್ರುವಾಯುವನ್ನು ಉಕ್ರೇನ್ ಯುದ್ಧದಲ್ಲಿ ಬಳಸಿದ್ದು ಇದು ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದ ನಿರ್ಣಯದ ಉಲ್ಲಂಘನೆಯಾಗಿದೆ. ಇಂತಹ ರಾಸಾಯನಿಕ ಅಸ್ತ್ರಗಳ ಬಳಕೆಯು ಒಂದು ಪ್ರತ್ಯೇಕ ಘಟನೆಯಲ್ಲ. ಬಹುಷಃ ಉಕ್ರೇನ್ನ ಪಡೆಗಳನ್ನು ಅದರ ಮುಂಚೂಣಿ ನೆಲೆಗಳಿಂದ ಹೊರಹಾಕಲು ಮತ್ತು ಯುದ್ಧಕ್ಷೇತ್ರದಲ್ಲಿ ಯುದ್ಧತಂತ್ರದ ಲಾಭಗಳನ್ನು ಸಾಧಿಸಲು ರಶ್ಯನ್ ಪಡೆಗಳು ಬಯಸಿರಬಹುದು ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಈ ಮಧ್ಯೆ, ರಶ್ಯದ ಕೈಗಾರಿಕೆ ಮತ್ತು ಮಿಲಿಟರಿ ಸಾಮಥ್ರ್ಯಗಳನ್ನು ದುರ್ಬಲಗೊಳಿಸುವ ಉದ್ದೇಶದಿಂದ ರಶ್ಯ, ಚೀನಾ ಹಾಗೂ ಇತರ ದೇಶಗಳ ಸುಮಾರು 300 ಸಂಸ್ಥೆಗಳ ವಿರುದ್ಧ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವುದಾಗಿ ಅಮೆರಿಕದ ಹಣಕಾಸು ಇಲಾಖೆ ಹೇಳಿದೆ. ಉಕ್ರೇನ್ನಲ್ಲಿ ನಡೆಸುತ್ತಿರುವ ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ಪಡೆಯಲು, ರಶ್ಯದ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಯೋಜನೆಯಲ್ಲಿ ರಶ್ಯಕ್ಕೆ ನೆರವಾಗುತ್ತಿರುವ ಸಂಸ್ಥೆಗಳನ್ನು ಶಿಕ್ಷಿಸುವುದು ಈ ಕ್ರಮದ ಉದ್ದೇಶವಾಗಿದೆ. ಈ ನಿರ್ಬಂಧಗಳು ರಶ್ಯದ ಯುದ್ಧಪ್ರಯತ್ನಗಳನ್ನು ಅಡ್ಡಿಪಡಿಸಲಿದೆ. ರಶ್ಯದ ಗಣಿಕಾರಿಕೆ, ಇಂಧನ ಮತ್ತು ಲೋಹಗಳ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಜ್ಯಾನೆಟ್ ಯೆಲೆನ್ ಹೇಳಿದ್ದಾರೆ.