ಅಮೆರಿಕದ ನೆರವು ಸ್ಥಗಿತದಿಂದ ಉಕ್ರೇನ್ ಸಮಸ್ಯೆ ಹೆಚ್ಚಲಿದೆ: ರಶ್ಯ
ಡಿಮಿಟ್ರಿ ಪೆಸ್ಕೋವ್ | Photo: NDTV
ಮಾಸ್ಕೊ: ಉಕ್ರೇನ್ಗೆ ಅಮೆರಿಕದ ಆರ್ಥಿಕ ನೆರವು ತೂಗುಯ್ಯಾಲೆಯಲ್ಲಿ ಇರುವುದರಿಂದ ಉಕ್ರೇನಿನ ಸಮಸ್ಯೆ ಹೆಚ್ಚಲಿದೆ ಮತ್ತು ಉಕ್ರೇನ್ ಪಾಶ್ಚಿಮಾತ್ಯರಿಗೆ ಇನ್ನಷ್ಟು ‘ಹೊರೆ’ಯಾಗಲಿದೆ ಎಂದು ರಶ್ಯ ಸೋಮವಾರ ಹೇಳಿದೆ.
ಅಮೆರಿಕ ಸರಕಾರ ಕಾರ್ಯಸ್ಥಗಿತ ಆಗುವುದು ಅಂತಿಕ ಕ್ಷಣದಲ್ಲಿ ತಪ್ಪಿಹೋದರೂ, ರಿಪಬ್ಲಿಕನ್ನರ ತೀವ್ರ ವಿರೋಧದಿಂದಾಗಿ ಉಕ್ರೇನಿಗೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸುವ ಸರಕಾರದ ಪ್ರಯತ್ನಕ್ಕೆ ತಡೆಯಾಗಿದ್ದು ಈ ಯೋಜನೆ ತೂಗುಯ್ಯಾಲೆಯಲ್ಲಿದೆ.
‘ ಈ ಸಂಘರ್ಷದ ಆಯಾಸ, ಕೀವ್ ಆಡಳಿತದ ಸಂಪೂರ್ಣ ಅಸಂಬದ್ಧ ಪ್ರಾಯೋಜಕತ್ವದ ಹೊರೆಯು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಹೆಚ್ಚಲಿದೆ. ಉಕ್ರೇನಿಗೆ ನೆರವು ಅನವಶ್ಯಕ, ಅಸಂಬದ್ಧ ಹೊರೆ ಎಂಬ ಸತ್ಯ ಅಮೆರಿಕ, ಯುರೋಪಿಯನ್ ಯೂನಿಯನ್ ಸೇರಿದಂತೆ ಪಾಶ್ಚಿಮಾತ್ಯರಿಗೆ ತಿಳಿಯಲಿದೆ. ಆಯಾಸವು ರಾಜಕೀಯ ವ್ಯವಸ್ಥೆಯ ವಿಘಟನೆಗೆ ಕಾರಣವಾಗುತ್ತದೆ. ಆದರೂ ಅಮೆರಿಕವು ಈ ಸಂಘರ್ಷದಲ್ಲಿ ತನ್ನ ಒಳಗೊಳ್ಳುವಿಕೆಯನ್ನು ಮುಂದುವರಿಸಲಿದೆ’ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.