ಯೆಮನ್ನಲ್ಲಿ ಹೌದಿ ನೆಲೆಗಳ ಮೇಲೆ ಅಮೆರಿಕದ ವೈಮಾನಿಕ ದಾಳಿ
ಸಾಂದರ್ಭಿಕ ಚಿತ್ರ Photo : NDTV
ವಾಷಿಂಗ್ಟನ್: ಯೆಮನ್ ರಾಜಧಾನಿ ಸನಾದಲ್ಲಿ ಹೌದಿಗಳ ಕ್ಷಿಪಣಿ ದಾಸ್ತಾನು ಕೇಂದ್ರ ಮತ್ತು ಕಮಾಂಡ್- ಮತ್ತು ನಿಯಂತ್ರಣ ಕೇಂದ್ರದ ಮೇಲೆ ಶನಿವಾರ ನಿಖರ ವೈಮಾನಿಕ ದಾಳಿ ನಡೆಸಿರುವುದಾಗಿ ಅಮೆರಿಕದ ಮಿಲಿಟರಿ ರವಿವಾರ ಹೇಳಿದೆ.
ದಕ್ಷಿಣ ಕೆಂಪು ಸಮುದ್ರ, ಬಾಬ್ ಅಲ್-ಮಂದೆಬ್ ಮತ್ತು ಏಡನ್ ಕೊಲ್ಲಿಯಲ್ಲಿ ಅಮೆರಿಕದ ಸಮರ ನೌಕೆಗಳು ಹಾಗೂ ವಾಣಿಜ್ಯ ಹಡಗುಗಳ ಮೇಲಿನ ದಾಳಿ ಸೇರಿದಂತೆ ಹೌದಿಗಳ ಕಾರ್ಯಾಚರಣೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ದಾಳಿ ನಡೆಸಿರುವುದಾಗಿ ಅಮೆರಿಕ ಮಿಲಿಟರಿಯ ಸೆಂಟ್ರಲ್ ಕಮಾಂಡ್ ಹೇಳಿದೆ.
ಕೆಂಪು ಸಮುದ್ರದ ಮೇಲೆ ಹೌದಿಗಳ ಡ್ರೋನ್ಗಳು ಹಾಗೂ ಹಡಗು ವಿಧ್ವಂಸಕ ಕ್ಷಿಪಣಿಗಳನ್ನೂ ಹೊಡೆದುರುಳಿಸಲಾಗಿದೆ. ಈ ಕಾರ್ಯಾಚರಣೆಯು ಅಂತರಾಷ್ಟ್ರೀಯ ನೌಕಾ ಯಾನ, ಪ್ರಾದೇಶಿಕ ಪಾಲುದಾರರು ಮತ್ತು ಮೈತ್ರಿಪಡೆಯ ಸಿಬ್ಬಂದಿಗಳನ್ನು ರಕ್ಷಿಸುವಲ್ಲಿ ಅಮೆರಿಕ ಮಿಲಿಟರಿಯ ಬದ್ಧತೆಯನ್ನು ಸೂಚಿಸಿದೆ ಎಂದು ಹೇಳಿಕೆ ತಿಳಿಸಿದೆ. ಈ ಮಧ್ಯೆ, ಹೌದಿಗಳ ವಿರುದ್ಧದ ವೈಮಾನಿಕ ದಾಳಿಯನ್ನು ಇಸ್ರೇಲ್ ಸೇನೆ ತೀವ್ರಗೊಳಿಸಿರುವುದಾಗಿ ವರದಿಯಾಗಿದೆ.