ಸುಡಾನ್ಗೆ 47 ದಶಲಕ್ಷ ಡಾಲರ್ ಮಾನವೀಯ ನೆರವು ಘೋಷಿಸಿದ ಅಮೆರಿಕ
Photo : NDTV
ವಾಷಿಂಗ್ಟನ್: ಯುದ್ಧದಿಂದ ಜರ್ಝರಿತಗೊಂಡಿರುವ ಸುಡಾನ್ ಹಾಗೂ ಎರಡು ನೆರೆಯ ದೇಶಗಳಿಗೆ 47 ದಶಲಕ್ಷ ಡಾಲರ್ಗೂ ಹೆಚ್ಚಿನ ಮಾನವೀಯ ನೆರವನ್ನು ಅಮೆರಿಕ ಘೋಷಿಸಿದೆ.
ಸುಡಾನ್ನಲ್ಲಿ ಕಳೆದ 1 ವರ್ಷದಿಂದ ಮುಂದುವರಿದಿರುವ ಸಂಘರ್ಷದ ಕಾರಣ ಕನಿಷ್ಠ 1 ದಶಲಕ್ಷ ಜನತೆ ಅಲ್ಲಿಂದ ದಕ್ಷಿಣ ಸುಡಾನ್ ಮತ್ತು ಚಾಡ್ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಈ ಮೂರೂ ದೇಶಗಳಲ್ಲಿ ಸಂಕಷ್ಟದಲ್ಲಿರುವ ಸುಮಾರು 25 ದಶಲಕ್ಷ ಜನತೆಗೆ(ನಿರಾಶ್ರಿತರ ಸಹಿತ) ಈ ನೆರವಿನ ಪ್ಯಾಕೇಜ್ನಿಂದ ಸಹಾಯವಾಗಲಿದೆ. ಅಮೆರಿಕದ ಮಾನವೀಯ ನೆರವು ಸುಡಾನ್ ಜನತೆಗೆ ಆಹಾರ, ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ಆಶ್ರಯ, ವೈದ್ಯಕೀಯ ಸೇವೆ(ಮಾನಸಿಕ ಆರೋಗ್ಯ ನೆರವು ಸೇರಿದಂತೆ) ಮತ್ತು ರಕ್ಷಣೆಯನ್ನು ಒದಗಿಸಲಿದೆ. ಇದರೊಂದಿಗೆ ಕಳೆದ ವರ್ಷದಿಂದ ಸುಡಾನ್ಗೆ 968 ದಶಲಕ್ಷ ಡಾಲರ್ ಗೂ ಹೆಚ್ಚಿನ ಮೊತ್ತದ ನೆರವನ್ನು ಅಮೆರಿಕ ಒದಗಿಸಿದಂತಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.
ಸುಡಾನ್ನಲ್ಲಿ ಕಳೆದ ಎಪ್ರಿಲ್ನಲ್ಲಿ ಜನರಲ್ ಅಬ್ದುಲ್ ಫತಾಹ್ ಬುರ್ಹಾನ್ ನೇತೃತ್ವದ ಸೇನೆ ಮತ್ತು ಮುಹಮ್ಮದ್ ಹಮ್ದನ್ ಡಗಾಲೊ ನೇತೃತ್ವದ ಅರೆಸೇನಾ ಪಡೆಯ ನಡುವೆ ಉಂಟಾದ ಬಿಕ್ಕಟ್ಟು ಉಲ್ಬಣಿಸಿ ಎರಡೂ ಪಡೆಗಳ ನಡುವೆ ಆಂತರಿಕ ಯುದ್ಧಕ್ಕೆ ಕಾರಣವಾಗಿದೆ. ಸಂಘರ್ಷದಲ್ಲಿ ಸಾವಿರಾರು ಮಂದಿ ಮೃತಪಟ್ಟಿರುವ ವರದಿಯಿದ್ದು 9 ದಶಲಕ್ಷಕ್ಕೂ ಅಧಿಕ ಮಂದಿ ಆಂತರಿಕವಾಗಿ ಸ್ಥಳಾಂತರಗೊಂಡಿದ್ದು 1.5 ದಶಲಕ್ಷ ನಿರಾಶ್ರಿತರು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.